Thursday, July 10, 2008

ಅಧಿಕೃತ ದರೋಡೆ...

ವಿವಿಧ ಪ್ರಾಯೋಗಿಕ ಅಡ್ಡಿಗಳಿಂದಾಗಿ ಶಾಸಕರ ಮತ್ತು ವಿಧಾನಸಭೆ ಕ್ಷೇತ್ರಗಳ ವಿವರ ಇಲ್ಲಿ ಹಾಕುವುದು ತಡವಾಗುತ್ತಿದೆ. ಆದರೆ, ಯಾಕೋ ಈಗ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ, ಈ ರೀತಿಯ ಯೋಚನೆಗಳಿಗೆ ಅರ್ಥವೇ ಇಲ್ಲವೇನೋ ಅನಿಸುತ್ತಿದೆ. ಇರಲಿ, ಸದ್ಯಕ್ಕೆ ನನ್ನ ತಲೆಯಲ್ಲಿ ಹುಳವಾಗಿ ಕೊರೆಯುತ್ತಿರುವ ವಿಷಯದ ಬಗೆಗೊಂದಿಷ್ಟು ಬರೆಯುತ್ತೇನೆ, ನಿಮ್ಮೆಲ್ಲರ ಅನಿಸಿಕೆಯೇನೆಂದು ತಿಳಿಯುವ ಕುತೂಹಲ ಕೂಡ ನನಗಿದೆ...

++++++++++++++++++++++++++++++

ಗದಗದಲ್ಲಿ ಕಪ್ಪತಗುಡ್ಡವೆಂಬ ಗುಡ್ಡವಿದೆ. ಹೊಸಪೇಟೆಯಿಂದ ಕೊಪ್ಪಳ ಮಾರ್ಗವಾಗಿ ಕಾರವಾರಕ್ಕೆ ಹೋಗುವಾಗ ಈ ಗುಡ್ಡದ ಮೂಲಕವೇ ಹೋಗಬೇಕು. ಗಾಳಿವಿದ್ಯುತ್ ಯೋಜನೆಯೊಂದು ಈ ಗುಡ್ಡದಲ್ಲಿ ಕಾರ್ಯವೆಸಗುತ್ತಿದೆ. ಇದು ಅಮೂಲ್ಯ ಸಸ್ಯಸಂಪತ್ತನ್ನು ಕೂಡ ಹೊಂದಿದೆ. ಅಷ್ಟು ಮಾತ್ರವಲ್ಲ, ಪ್ರತಿ ಅಮಾವಾಸ್ಯೆಗೂ ಇಲ್ಲಿ ಕಾಡ್ಗಿಚ್ಚು ಹಬ್ಬುವುದು ಸಾಮಾನ್ಯವಾಗಿ, ಕೆಲಕಾಲ ಸುದ್ದಿ ಮಾಡಿತ್ತಂತೆ. ಹಿಂದೆ ಕೊಡರಕೊಂಕಿ ಅನ್ನುವ ಹಕ್ಕಿಗಳ ಸಾಮ್ರಾಜ್ಯವಾಗಿದ್ದ ಈ ಗುಡ್ಡದಲ್ಲಿ ಈಗ ಈ ಹಕ್ಕಿಗಳು ಬಹಳ ಕಡಿಮೆಯಾಗಿವೆಯಂತೆ.(ಈ ಹಕ್ಕಿಗಳು ಸುಗ್ಗಿಯ ಕಾಲದಲ್ಲಿ ಬೆಳೆಗಳಿಗೆ ದಾಳಿಯಿಟ್ಟು ಗುಡ್ಡದಲ್ಲಿ ಸಂಗ್ರಹ ಮಾಡುತ್ತಿದ್ದವಂತೆ, ಇವೆಲ್ಲ ನಾನು ಕೇಳಿತಿಳಿದಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಯಾರಲ್ಲಾದರೂ ಇದ್ದಲ್ಲಿ ತಿಳಿಯಲು ನಾನು ಕುತೂಹಲಿ)

ಈಗ ಈ ಗುಡ್ಡ ಮತ್ತೆ ಸುದ್ದಿ ಮಾಡಹೊರಟಿದೆ. ಬಲ್ಲ ಮೂಲಗಳ ಪ್ರಕಾರ ಕಪ್ಪತಗುಡ್ಡದಲ್ಲಿ ಗಣಿಗಾರಿಕೆ ಆರಂಭವಾಗುತ್ತಿದೆ. ಇನ್ನು ಮುಂದೆ ಇಲ್ಲಿ ಬುಲ್ ಡೋಜರ್-ಗಳದೇ ಕಾರುಬಾರಂತೆ. ಇನ್ನಷ್ಟು ತಿಳಿದವರು ಹೇಳುವ ಪ್ರಕಾರ ಈ ಗುಡ್ಡದಲ್ಲಿ ಮತ್ತು ಸುತ್ತಮುತ್ತ, ಹಲವು ಲೋಹಗಳ ನಿಕ್ಷೇಪವಿದೆ. ಎಲ್ಲಕ್ಕಿಂತ ಹೆಚ್ಚಾಗಿ ಚಿನ್ನದ ನಿಕ್ಷೇಪವಿದೆ. ಈ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ವರದಿಗಳಲ್ಲಿ ಪ್ರಸ್ತಾಪವೂ ಇದೆ.

ಅರಣ್ಯವಿರುವ ಪ್ರದೇಶದಲ್ಲಿ ಗಣಿಗಾರಿಕೆ, ಅರಣ್ಯ ಖಾತೆಯ ಸಹಯೋಗದಿಂದಲೇ ನಡೆಯಬೇಕು. ಖಾತೆ ಹಂಚಿಕೆ, ಜಿಲ್ಲಾ ಉಸ್ತುವಾರಿ ಇತ್ಯಾದಿಗಳಿಗೆ ಸಂಬಂಧಿಸಿದ ಎಲ್ಲಾ ರಾಜಕೀಯ ಲೆಕ್ಕಾಚಾರಗಳಲ್ಲೂ ವ್ಯವಸ್ಥಿತವಾಗಿ ಗಣಿದಣಿಗಳ ಹಿತಾಸಕ್ತಿ ಕಾಪಾಡಿಕೊಳ್ಳಲಾಗಿದೆ. ಗದಗ ಜಿಲ್ಲೆಯ ಉಸ್ತುವಾರಿ ಸಚಿವರು ಶ್ರೀರಾಮುಲು... ಖಾತೆ ಮರುಹಂಚಿಕೆಯ ನಂತರ ಅರಣ್ಯಖಾತೆ ಬರಲಿರುವುದು ಜನಾರ್ದನ ರೆಡ್ಡಿಗಂತೆ... ತಮ್ಮ ಕಾರ್ಯಕ್ಕೆ ಯಾರಿಂದಲೂ ತೊಂದರೆ ಬರದಂತೆ ನೋಡಿಕೊಳ್ಳಲು ಉಸ್ತುವಾರಿ ಸಚಿವರಿದ್ದರೆ, ವ್ಯವಸ್ಥಿತವಾಗಿ ಕಾರ್ಯ ಮುಗಿಸಲು ಅರಣ್ಯಖಾತೆಯ ಸಂಪೂರ್ಣ ಸಹಕಾರವಿರುತ್ತದೆ. ಹಾಗೆ, ಇಲ್ಲಿನ ಚಿನ್ನದ ಗಣಿಯ ರಾಷ್ಟ್ರೀಕರಣವಾಗದೆಯೇ, ಚಿನ್ನಕ್ಕಾಗಿ ನಡೆಯುತ್ತಿದೆಯೆಂದು ಅಧಿಕೃತವಾಗಿ ಯಾರಿಗೂ ಗೊತ್ತಾಗದೆಯೇ, ಚಿನ್ನದ ನಿಕ್ಷೇಪಗಳು ಮಾಯವಾಗಲಿವೆ. ಸದ್ಯಕ್ಕೆ ಇದನ್ನು ವಿರೋಧಿಸುವವರೂ ಯಾರೂ ಇಲ್ಲ.

ಗಣಿಗಾರಿಕೆಯೊಂದು ಆಕ್ಟೋಪಸ್ ಇದ್ದಹಾಗೆ... ಎಲ್ಲಾ ಗುಡ್ಡಗಳನ್ನು ಕಡಿದು ಸಸ್ಯಸಂಪತ್ತನ್ನು ನುಂಗಿಹಾಕಿ ಸುತ್ತಲ ಜನರ ಬದುಕನ್ನೇ ಕಿತ್ತುಕೊಂಡು ಮಳೆ-ಬೆಳೆಯಾಗದಂತೆ ಮಾಡಿದರೂ ಇದರ ಹಸಿವು ಇಂಗದು. ಗಣಿಗಾರಿಕೆಗೆ ಸಹ್ಯಾದ್ರಿ, ಪಶ್ಚಿಮ ಘಟ್ಟದ ಸೆರಗಿನಲ್ಲಿರುವ ಚೆನ್ನಗಿರಿ, ಕಲಘಟಗಿ ಹಾಗೂ ಇನ್ನು ಹಲವಾರು ಊರುಗಳು ಬಲಿಯಾಗಲಿವೆ. ಚಿನ್ನದ ನಿಕ್ಷೇಪವಿದೆಯೆಂದು ಕಂಡುಬಂದ ಧಾರವಾಡದ ಎತ್ತಿನಗುಡ್ಡದ ಮೇಲೂ ಗಣಿಲಾಬಿ ಕಣ್ಣು ಇಷ್ಟರಲ್ಲೇ ಬಿದ್ದಿರುತ್ತದೆ.

ಇದರಿಂದ ಆ ಊರುಗಳಿಗಂತೂ ಏನೇನೂ ಲಾಭವಿಲ್ಲ. ಪರಿಣಾಮ, ಬೆಲೆಬಾಳುವ ಅರಣ್ಯ ಸಂಪತ್ತಿನ ಮತ್ತು ಪ್ರಾಣಿಸಂಪತ್ತಿನ ನಾಶ. ಅದೂ ನಾಗರಿಕರು ಆರಿಸಿ ಕಳುಹಿಸಿದ ಪ್ರತಿನಿಧಿಗಳಿಂದ ತುಂಬಿದ ಸರಕಾರದಿಂದಲೇ. ವ್ಯವಸ್ಥಿತವಾಗಿ, ಮತ್ತು ಅಧಿಕೃತವಾಗಿ. ಏನಂತೀರಿ?

++++++++++++++++

(ಇದರಲ್ಲಿರುವ ಮಾಹಿತಿಗೆ ಪೂರಕವಾಗಿ ಇನ್ನೇನಾದರೂ ಇದ್ದಲ್ಲಿ, ಅಥವಾ ಬೇರೇನಾದರೂ ಮಾಹಿತಿಯಿದ್ದಲ್ಲಿ, ಅದನ್ನು ತಿಳಿಸಬಹುದು. ಬರಿಯ ಮಾಹಿತಿಗಳಿಂದ ಬೇರೇನೂ ಪ್ರಯೋಜನವಾಗದು ಅನ್ನುವುದು ಒಂದು ಮಟ್ಟಿಗೆ ನಿಜವಿರಬಹುದು, ಆದರೂ ಇರ್ಲಿ ಅಂತ ಈ ಬರಹ... ಏನಾದರೂ ಒಳ್ಳೆಯದಾದೀತೇನೋ ಅಂತ ಆಶೆ, ಅಷ್ಟೆ.)

2 comments:

shankar said...

ಇದನ್ನು ಹಗಲು ದರೋಡೆ ಅಂತ ಕರೆದರೆ ಸೂಕ್ತ, ಅಥವಾ ಕಾನೂನು ಸಮ್ಮತ ದರೋಡೆ ಅಂತ ಕರೆಯಬಹುದು. ಶ್ರೀ ಅವರ ಪರಿಸರ ಕಾಳಜಿ ಮತ್ತು ಸಮಾಜದಲ್ಲಿನ ಘಟನೆಗಳ ಬಗ್ಗೆ ಅವರ ಆಸಕ್ತಿ ಒಳ್ಳೆಯದಿದೆ.ಇದರ ವಿರುದ್ಧ ಹೋರಾಡಿದರೇ ನಾವೇನಾದೇವು ಅನ್ನುವ ಸತ್ಯದ ಅರಿವಿದ್ದರೂ ಇಂತ ವಿಷಯಗಳ ಬಗ್ಗೆ ಚಿಂತನೆ ಮಾಡುವುದರಲ್ಲಿ ತಪ್ಪೇನಿಲ್ಲ. ಹೀಗಾಗಿ ಶ್ರೀಯವರೆ ನಿಮ್ಮ ಈ ಚಿಂತನೆಯ ಹಾದಿಯಲ್ಲಿ ನನ್ನ ಚಿಂತನೆಯೂ ಸಾಗಲಿದೆ.

ಸಂತೋಷಕುಮಾರ said...

ಕಪ್ಪತಗುಡ್ದದ ಬಗ್ಗೆ ಕಳಕಳಿಯಿಂದ ಬರೆದಿರುವುದು ನೋಡಿ ತುಂಬಾ ಖುಷಿಯಾಯ್ತು. ರಾಮಾಯಣದಲ್ಲಿ ಹನುಮಂತ ಸಂಜೀವಿನಿ ಹೊತ್ತು ತರಬೇಕಾದರೆ ಅದರ ಒಂದು ತುಂಡು ಕೆಳಗೆ ಬಿದ್ದು ಕಪ್ಪತಗಿರಿಯಾಯ್ತು ಅನ್ನೋದು ವಾಡಿಕೆ. ಇಲ್ಲಿ ಕಾಡ್ಗಿಚ್ಚು ಅನ್ನೋದು ತೀರಾ ಮಾಮೂಲು, ಅದಕ್ಕೆ ಸ್ಥಳೀಯರ ಸಹಕಾರವೂ ಇತ್ತು ಅನ್ನೋದು ಖರೇ. ಹೀಗಾಗಿ ಮೊದಲೆಲ್ಲಾ ಕಂಡು ಬರುತ್ತಿದ್ದ ವನ್ಯಜೀವಿಗಳು ಈಗ ಅಲ್ಲಿ ಹುಡುಕಿದರೂ ಕಾಣ ಸಿಗುತ್ತಿಲ್ಲ. ಕಳೆದ ತಿಂಗಳಿನಲ್ಲೆ ಇಲ್ಲಿಂದ ತಪ್ಪಿಸಿಕೊಂಡ ಚಿರತೆಯೋದು ಸೀದಾ ಗದಗ ನಗರಕ್ಕೆ ನುಗ್ಗಿ ಬಿಟ್ಟಿತ್ತು. ನಮ್ಮ ಮನೆಯವರ ಮಾತನ್ನೆ ನಂಬುವಂತಾದರೆ ಈ ಗಣಿಗಾರಿಕೆ ನಡೆಸುವವರೆ ಬೇಕೆಂದೆ ಪ್ರಾಣಿಗಳು ಸಾಯಲಿ ಅಥವಾ ಓಡಿ ಹೋಗಲಿ ಅಂತಾ ಕಾಡಿಗೆ ಬೆಂಕಿ ಇಡುತ್ತಾರಂತೆ..

ಕೆಲ ವರ್ಷಗಳ ಹಿಂಗೆ ಕಪ್ಪತಗುಡ್ದದಲ್ಲಿ ಚಿನ್ನದ ನಿಕ್ಶೇಪ ಇದೆಯೆಂದು ಗುಲ್ಲು ಹಬ್ಬಿತ್ತು.ಈಗಲೂ ರಾಜ್ಯದಲ್ಲಿ ಅತಿ ಹೆಚ್ಚು ಗಾಳಿ ವಿದ್ಯುತ ಉತ್ಪಾದಿಸಲಾಗುತ್ತಿರುವುದು ಕಪ್ಪತಗಿರಿಯಲ್ಲಿ ಮಾತ್ರ.. ಇಷ್ಟೆಲ್ಲಾ ವಿಶೇಷಗಳಿರುವ ಕಪ್ಪತಗಿರಿ ಗಣಿಗಾರಿಕೆಗೆ ನಲುಗುತ್ತಿರುವುದು ನಮ್ಮೆಲ್ಲರ ದುರ್ದೈವ.. ಇದೇ ಕಾರಣಕ್ಕೆ ಗಣಿ ಧಣಿಗಳು ಕೊಟ್ಯಂತರ ಚೆಲ್ಲಿ ಚುನಾವಣೆಯಲ್ಲಿ ಗದಗ ಕ್ಷೇತ್ರ ಗೆದ್ದುಕೊಂಡರು ಅನ್ನೊದನ್ನ ನಮ್ಮಲ್ಲಿ ಎಲ್ಲರೂ ಆಡಿಕೋಳ್ತಾರೆ.

ಮಾದ್ಯಮಗಳ ನಿರ್ಲ್ಯಕ್ಷಕ್ಕೆ ಒಳಗಾದ ವಿಷಯವೊಂದನ್ನು ಪ್ರಸ್ತಾಪಿಸಿ, ಕಡೆ ಪಕ್ಷ ಒಂದು ವರ್ಗಕ್ಕಾದರೂ ತಲುಪಿಸಿದ ನಿಮಗೆ ಧನ್ಯಾವಾದಗಳು..