Friday, October 24, 2008

ಅಣುಶಕ್ತಿ - ಒಂದಿಷ್ಟು ವಿಚಾರಗಳು... (ಭಾಗ-1)

ಅಣು ಶಕ್ತಿಯ ತಾಂತ್ರಿಕತೆ...

ಅಣುಗಳ ವಿದಳನದಿಂದ ಅಗಾಧ ಪ್ರಮಾಣದ ಶಕ್ತಿ ಬಿಡುಗಡೆಯಾಗುತ್ತದೆಂಬ ಸತ್ಯವನ್ನು ಬಲು ಹಿಂದೆಯೇ ಕಂಡುಹಿಡಿಯಲಾಯಿತು. ಜಗತ್ತು ಈಗಾಗಲೇ ಅಣುಶಕ್ತಿಯನ್ನು ಅವಲಂಬಿಸುತ್ತ ದಾಪುಗಾಲಿಡುತ್ತಿದೆ. ಅಣುಶಕ್ತಿ ಬೇಕು, ಬಾಂಬ್ ಬೇಡವೆನ್ನುವುದು ಕಾಂಗ್ರೆಸ್ ವಿಚಾರಧಾರೆ, ಬಾಂಬ್, ಅಣುಶಕ್ತಿ - ಎರಡೂ ಬೇಕು ಎಂಬುದು ಬಲಪಂಥೀಯರ ಮತ್ತು ಎಡಪಂಥೀಯರ ವಿಚಾರಧಾರೆ - ಹೀಗೆ ಪಕ್ಷಾಧಾರಿತವಾಗಿ ವಿಚಾರಗಳಿಗೂ ಬಣ್ಣ ಬಂದಿದೆ. ಹಾಗಾದರೆ, ಈ ವಾದಗಳಲ್ಲಿ ಸತ್ಯ ಯಾವುದು? ಸರಿ ಯಾವುದು? ದೂರದರ್ಶಿ ವಿಚಾರ ಯಾವುದು?

ತನ್ನ ಕೊನೆಯಿಲ್ಲದ ಬೇಡಿಕೆಗಳ ಪೂರೈಕೆಗೆ ಬೇಕಾದ ಶಕ್ತಿಮೂಲಗಳನ್ನರಸುತ್ತ ಬಲು ದೂರ ಸಾಗಿದ ಮಾನವ, ಇಂದು ಅಣುಶಕ್ತಿ ಎಷ್ಟು ಸುರಕ್ಷಿತ ಎಂಬುದರ ಬಗ್ಗೆ ಚಿಂತಿಸುತ್ತಿಲ್ಲ. ಅಣುಶಕ್ತಿಯ ತಾಂತ್ರಿಕತೆಯ ಕುರಿತು ಭೌತಶಾಸ್ತ್ರದ ಪಠ್ಯಪುಸ್ತಕಗಳಲ್ಲಿ ನಮ್ಮಲ್ಲಿ ಕೆಲವರು ಕಾಲೇಜಿನಲ್ಲಿ ಓದಿರುತ್ತೇವೆ, ಹಾಗೆಯೇ ಮರೆತುಬಿಟ್ಟಿರುತ್ತೇವೆ. ಒಂದು ವೇಳೆ ನೆನಪಿದ್ದರೂ, ಆ ಪ್ರಾಯ ಅಣುಶಕ್ತಿಯ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳನ್ನು ವಿಶ್ಲೇಷಿಸುವಷ್ಟು ಪ್ರೌಢವಾಗಿರುವುದಿಲ್ಲ, ಹಾಗೂ ಅವಶ್ಯಕತೆಯೂ ಹುಟ್ಟುವುದಿಲ್ಲ. ಈ ಹಿನ್ನೆಲೆಯಲ್ಲಿ ಒಂದಿಷ್ಟು ಮಥನ...

ಅಣುವಿದಳನ

ವಿಶ್ವದಲ್ಲಿರುವ ಪ್ರತಿಯೊಂದೂ ವಸ್ತುವೂ ಸೂಕ್ಷ್ಮವಾದ ಅಣುಗಳಿಂದ ಮಾಡಲ್ಪಟ್ಟಿದೆ. ಜೀವ ಇರುವ ಮತ್ತು ಇಲ್ಲದಿರುವ ಚರಾಚರ ಪದಾರ್ಥಗಳು ಅಣುಗಳಿಂದ ರಚಿತವಾಗಿವೆ. ಒಂದು ಅಣು ತನ್ನೊಳಗಿನ ಘಟಕಗಳನ್ನು ಕಳೆದುಕೊಂಡು, ಶಕ್ತಿ ಉತ್ಪಾದಿಸುವ ಕ್ರಿಯೆಯೇ ಅಣುವಿದಳನ. ಹಾಗೆಯೇ ಎರಡು ಅಣುಗಳು ಸೇರಿ ಒಂದಾಗುವ ಪ್ರಕ್ರಿಯೆಯಲ್ಲೂ ಶಕ್ತಿ ಬಿಡುಗಡೆಯಾಗುತ್ತದೆ. ಇದಕ್ಕೆ ಅಣು ಸಮ್ಮಿಳನ ಎನ್ನುತ್ತಾರೆ. ಪರಮಾಣು ಸಮ್ಮಿಳನ ಅಥವಾ ವಿದಳನ ಕ್ರಿಯೆಗಳು ನೈಸರ್ಗಿಕವಾಗಿ ಎಲ್ಲಿಯೂ ಜರುಗುವುದಿಲ್ಲ. ಇದಕ್ಕೆ ನಿಯಂತ್ರಿತ ವಾತಾವರಣ ಮತ್ತು ಸೂಕ್ತ ಜಾಗರೂಕತೆಯ ಅವಶ್ಯಕತೆಯಿದೆ.

ಜಗತ್ತಿನಲ್ಲಿ 117 ಮೂಲವಸ್ತುಗಳು ಇಲ್ಲಿಯವರೆಗೆ ಕಂಡುಹಿಡಿಯಲ್ಪಟ್ಟಿವೆ. ಜಗತ್ತಿನ ಪ್ರತಿಯೊಂದು ವಸ್ತುವೂ ಈ 117 ಮೂಲವಸ್ತುಗಳಲ್ಲಿ ಒಂದಲ್ಲ ಒಂದು ಮೂಲವಸ್ತು, ಅಥವಾ ಒಂದಕ್ಕಿಂತ ಹೆಚ್ಚು ಮೂಲವಸ್ತುಗಳ ಕಾಂಬಿನೇಶನ್-ನಿಂದ ಮಾಡಲ್ಪಟ್ಟಿದೆ... ಸಾಮಾನ್ಯವಾಗಿ ಎಲ್ಲಾ ಮೂಲವಸ್ತುಗಳ ಅಣುಗಳೂ ಸ್ಥಿರ ಸ್ಥಿತಿಯಲ್ಲಿರುತ್ತವೆ. ಆದರೆ ಕೆಲವು ವಿಶಿಷ್ಠ ವಿಧದ ಮೂಲ ವಸ್ತುಗಳಲ್ಲಿ ಅಣುಗಳು ಅಸ್ಥಿರವಾಗಿರುತ್ತವೆ. ಇಂತಹ ಅಸ್ಥಿರ ಅಣುಗಳು ಸ್ಥಿರತೆ ಸಾಧಿಸುವ ಯತ್ನದಲ್ಲಿ ನಿರಂತರ ವಿಕಿರಣ ಕಾರುವ ಗುಣ ಹೊಂದಿರುತ್ತವೆ.

ಇಂತಹ ವಿಕಿರಣಕಾರಕ ಅಣುಗಳಲ್ಲಿ ಆಲ್ಫಾ, ಗಾಮಾ ಮತ್ತು ಬೀಟಾ ಎಂಬ 3 ರೀತಿಯ ವಿಕಿರಣಗಳು ಹೊರಹೊಮ್ಮುತ್ತವೆ. ಈ ಮೂರೂ ವಿಧಗಳು ಮೂಲತಃ ಮಾನವ ಮತ್ತು ಇತರ ಜೀವಿಗಳ ಶರೀರಕ್ಕೆ ಅಪಾಯಕಾರಿಯಾಗಿರುತ್ತವೆ. ಯಾವುದೇ ಒಂದು ವಿಕಿರಣಕಾರಕ ಅಣು ಅಥವಾ ಮೂಲವಸ್ತು, ವಿಭಜನೆ ಹೊಂದಿದಂತೆಲ್ಲಾ ಕ್ಷಯಗೊಳ್ಳುತ್ತಾ ಹೋಗುತ್ತದೆ. ವಿಭಜಿತ ಅಣುವಿನಿಂದ ಸೃಷ್ಟಿಯಾಗುವ ಮರಿ ಅಣುಗಳು ವಿಕಿರಣಗಳನ್ನು ಬಿಡುಗಡೆ ಮಾಡಲೂ ಬಹುದು, ಮಾಡದಿರಲೂ ಬಹುದು.

ಕ್ಷಯವಾಗುವ ಮೂಲಕ ಅಣುಗಳು ಸ್ಥಿರವಾಗುತ್ತಾ ಹೋಗುತ್ತವೆ. ಈರೀತಿ ಕ್ಷಯವಾಗುತ್ತಾ ಮೊದಲಿದ್ದ ದ್ರವ್ಯರಾಶಿಯ ಅರ್ಧದಷ್ಟಾಗಲು ಬೇಕಾಗುವ ಕಾಲಾವಧಿಗೆ ಆ ಮೂಲವಸ್ತುವಿನ ಅರ್ಧಾಯಸ್ಸು ಎನ್ನಲಾಗುತ್ತದೆ. ಆದರೆ ಅಣುಗಳ ಈ ಕ್ರಿಯೆ ಜರುಗಲು ಸಾವಿರಾರು ವರ್ಷಗಳು ಬೇಕಾಗುತ್ತವೆ. ಅಲ್ಲಿಯವರೆಗೂ ಈ ಅಣುಗಳು ವಿಕಿರಣಗಳನ್ನು ಸೂಸುತ್ತಿರುತ್ತವೆ. ವಿಕಿರಣಗಳು ಮಾನವ ಶರೀರಕ್ಕೆ ಹಾನಿಕಾರಕವಾಗಿದ್ದು, ಇದರಿಂದಾಗುವ ನಷ್ಟ ಭರಿಸಲಾಗದಂತಹುದು.


ಯುರೇನಿಯಂ ಎಂಬ ಅಣುಶಕ್ತಿ ಇಂಧನ

ಸಾಮಾನ್ಯವಾಗಿ ಅಣು ಸ್ಥಾವರಗಳಲ್ಲಿ ಶಕ್ತಿ ಉತ್ಪಾದಿಸಲು ಬಳಸುವ ಮೂಲವಸ್ತು ಯುರೇನಿಯಂ ಆಗಿರುತ್ತದೆ. ಯುರೇನಿಯಂ ಮೂಲವಸ್ತುವಿನಲ್ಲಿ, ಯುರೇನಿಯಂ-238 ಮತ್ತು ಯುರೇನಿಯಂ-235 ಎಂಬ ಎರಡು ವಿಧಗಳಿರುತ್ತವೆ. ಯುರೇನಿಯಂ ಅದಿರಿನಲ್ಲಿ ಯುರೇನಿಯಂ-238 ವಿಪುಲವಾಗಿರುತ್ತದೆಯಾದರೂ ಅದನ್ನು ವಿಭಜಿಸಲು ಅಪಾರ ಶಕ್ತಿ ಬೇಕು. ಹಾಗಾಗಿ ಅದನ್ನು ನೇರವಾಗಿ ವಿದಳನ ಕ್ರಿಯೆಗೆ ಒಳಪಡಿಸಲು ಸಾಧ್ಯವಿಲ್ಲ. ಆದರೆ, ಯುರೇನಿಯಂ-235 ಐಸೋಟೋಪ್ ಬಹಳ ಕಡಿಮೆ ಶಕ್ತಿ ಉಪಯೋಗಿಸಿಕೊಂಡು ಸುಲಭವಾಗಿ ವಿದಳನ ಹೊಂದುತ್ತದೆ. ಹಾಗಾಗಿ ಅಣು ಸ್ಥಾವರಗಳಲ್ಲಿ ಮಾಡುವ ವಿದಳನ ಪ್ರಕ್ರಿಯೆಗೆ ಯುರೇನಿಯಂ-235 ಎಂಬ ವಿಧ ಅಗತ್ಯವಾಗಿರುತ್ತದೆ. ಆದರೆ ನೈಸರ್ಗಿಕ ಅದಿರಿನಲ್ಲಿ ಇದರ ಪ್ರಮಾಣ ಕಡಿಮೆಯಿರುತ್ತದೆ. ಹಾಗಾಗಿ ಯುರೇನಿಯಂ-235 ಪಡೆಯಲು ಅದಿರನ್ನು ಪರಿಷ್ಕರಿಸಬೇಕಾಗುತ್ತದೆ.

ಯುರೇನಿಯಂ-235 ಅಣುವನ್ನು ವಿದಳನಕ್ಕೊಳಪಡಿಸಿದಾಗ ಅದು ಎರಡು ಭಾಗಗಳಾಗಿ ವಿಭಜನೆ ಹೊಂದುತ್ತದೆ. ಈ ಎರಡು ಮರಿ ಅಣುಗಳ ಒಟ್ಟು ತೂಕ, ಮತ್ತು ಮೂಲ ಯುರೇನಿಯಂ ಅಣುವಿನ ತೂಕದಲ್ಲಿರುವ ವ್ಯತ್ಯಾಸವೇ ಶಕ್ತಿಯಾಗಿ ಮಾರ್ಪಟ್ಟು ಹೊರಹೊಮ್ಮುತ್ತದೆ. ಈ ಮೂಲತತ್ವವನ್ನು ವಿಜ್ಞಾನಿ ಐನ್ ಸ್ಟೈನ್ ತಮ್ಮ E=MC2 ಎಂಬ ಸೂತ್ರದಲ್ಲಿ ಹೇಳಿದ್ದಾರೆ. ಒಂದು ಗ್ರಾಮ್ ದ್ರವ್ಯರಾಶಿಯಷ್ಟು ಯರೇನಿಯಂನ್ನು ವಿಭಜಿಸಿ ಶಕ್ತಿಯನ್ನಾಗಿ ಪರಿವರ್ತಿಸಿದಾಗ ನೂರಾರು ಕಿಲೋ ಕಲ್ಲಿದ್ದಿಲು ಉರಿಸಿದಾಗ ಸಿಗುವ ಶಕ್ತಿಗೆ ಸಮವಾಗಿರುತ್ತದೆ.

ಸರಪಳಿ ಕ್ರಿಯೆ

ಅಣು ಸ್ಥಾವರಗಳಲ್ಲಿ ಅಣುಶಕ್ತಿಯನ್ನು ಪಡೆಯಲು ಅಣುಗಳ ಸರಪಳಿ ಕ್ರಿಯೆ, ಅಥವಾ ಚೈನ್ ರಿಯಾಕ್ಷನ್- ನಡೆಸಲಾಗುತ್ತದೆ. ಚೈನ್ ರಿಯಾಕ್ಷನ್-ನಲ್ಲಿ ಯುರೇನಿಯಂ 235ರ ಅಣುವಿನಿಂದ ಬಿಡುಗಡೆಯಾದ ನ್ಯೂಟ್ರಾನ್ ಇನ್ನೊಂದು ಯುರೇನಿಯಂ-235ರ ಅಣುವಿಗೆ ಹೊಡೆದು ಅದನ್ನು ವಿದಳನಗೊಳಿಸುತ್ತದೆ, ಈ ಕ್ರಿಯೆಯಲ್ಲಿ ಬಿಡುಗಡೆಯಾದ ನ್ಯೂಟ್ರಾನ್ ಮತ್ತೊಂದು ಅಣುವನ್ನು ವಿದಳನಗೊಳಿಸುತ್ತದೆ, ಹೀಗೆ ನಿರಂತರವಾಗಿ ಮುಂದುವರಿಯುವ ಕಾರಣ ಇದಕ್ಕೆ ಸರಪಣಿ ಕ್ರಿಯೆ ಎಂಬ ಹೆಸರು. ಈ ಸರಪಳಿ ಕ್ರಿಯೆಯು ಯುರೇನಿಯಂ-235 ಅಣು ವಿಧದಲ್ಲಿ ನಿರಂತರವಾಗಿ ನಡೆಯುತ್ತದೆ. ಆಗ ಆಗಾಧ ಪ್ರಮಾಣದಲ್ಲಿ ಶಕ್ತಿ ಬಿಡುಗಡೆ ಆಗುತ್ತದೆ. ಆದರೆ ಯು-238ನಲ್ಲಿ ನಿರಂತರ ಸರಪಳಿ ಕ್ರಿಯೆ ಸಾಧ್ಯವಿಲ್ಲ. ಈ ಕಾರಣದಿಂದಲೇ ಯು-235 ಅನ್ನು ಅಣ್ವಸ್ತ್ರಗಳ ಹಾಗೂ ಅಣುಬಾಂಬ್ ಗಳ ತಯಾರಿಕೆಯಲ್ಲಿ ಮತ್ತು ಅಣು ಸ್ಥಾವರಗಳಲ್ಲಿ ಶಕ್ತಿ ಉತ್ಪಾದಿಸಲು ಬಳಸುತ್ತಾರೆ.

ಸರಪಳಿ ಕ್ರಿಯೆಯಿಂದ ಅಗಾಧ ಪ್ರಮಾಣದಲ್ಲಿ ಶಕ್ತಿ ಬಿಡುಗಡೆ ಆಗುತ್ತದೆ. ಬಾಂಬುಗಳಲ್ಲಿ ಈ ಕ್ರಿಯೆ ನಿರಂತರವಾಗಿ ಮತ್ತು ತಡೆರಹಿತವಾಗಿ ನಡೆಯುತ್ತದೆ. ಆದರೆ, ಅಣು ಸ್ಥಾವರಗಳಲ್ಲಿ ನಡೆಸುವ ಸರಪಳಿ ಕ್ರಿಯೆಯನ್ನು ನಿಯಂತ್ರಿಸುವ ಅನಿವಾರ್ಯತೆ ಇರುತ್ತದೆ. ಹಾಗಾಗಿ ಅಣು ಸ್ಥಾವರಗಳಲ್ಲಿ ಸರಪಳಿ ಕ್ರಿಯೆಯನ್ನು ನಿಯಂತ್ರಿಸಲು ಹಲವು ರೀತಿಗಳನ್ನು ಅನುಸರಿಸಲಾಗುತ್ತದೆ. ಕ್ಯಾಡ್ಮಿಯಂನ ನಿಯಂತ್ರಣ ಕೊಳವೆಯನ್ನು ಸ್ಥಾವರದೊಳಗೆ ನುಗ್ಗಿಸಿ, ಹೆಚ್ಚಾದ ನ್ಯೂಟ್ರಾನುಗಳನ್ನು ಅದು ಹೀರಿಕೊಳ್ಳುವಂತೆ ಮಾಡಲಾಗುತ್ತದೆ, ಆ ಮೂಲಕ ಸ್ಫೋಟವಾಗದಂತೆ ತಡೆಯಲಾಗುತ್ತದೆ.

ಅಣು ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆಯಾಗಬೇಕೆಂದರೆ, ಸರಪಳಿ ಕ್ರಿಯೆ ನಡೆಯುತ್ತಲೇ ಇರಬೇಕು. ಇದರಿಂದ ಸ್ಥಾವರದ ಒಳಗೆಲ್ಲಾ ಅತ್ಯಧಿಕ ಶಾಖ ಉತ್ಪನ್ನ ಆಗುತ್ತಿರುತ್ತದೆ. ಈ ಶಾಖವನ್ನು ನಿಯಂತ್ರಿಸಲೆಂದು, ತಣ್ಣೀರನ್ನು ನಿರಂತರವಾಗಿ ಸ್ಥಾವರದ ಸುತ್ತ ಹಾಯಿಸಲಾಗುತ್ತದೆ. ಈ ನೀರಿನ ನಿರಂತರ ಪೂರೈಕೆಯೇನಾದರೂ ಕೈಕೊಟ್ಟಲ್ಲಿ ಶಾಖ ಹೆಚ್ಚಿ ವೈಪರೀತ್ಯಗಳು ಉಂಟಾಗಬಹುದು, ಇದು ಸ್ಥಾವರದ ಗೋಪುರ ಕರಗುವ ವರೆಗೂ ಬರಬಹುದು.

ಅಣುಸ್ಥಾವರವೆಂದರೆ ನಿಯಂತ್ರಿತ ಬಾಂಬ್...!

ಬಹಳ ಸಣ್ಣ ಪ್ರಮಾಣದ ಮೂಲವಸ್ತುವನ್ನು ಶಕ್ತಿಯಾಗಿ ಪರಿವರ್ತಿಸಿದಾಗಲೂ ಅದರಿಂದ ಉಂಟಾಗುವ ಶಕ್ತಿ ದೊಡ್ಡ ಪ್ರಮಾಣದಲ್ಲಿರುತ್ತದೆ. ಮೊದಲು ವಿಭಜನೆಗೊಂಡ ಅಣು ಎರಡು ಭಾಗವಾಗಿ ಒಡೆಯುತ್ತದೆ. ಆಗ ಇವಗಳ ನಡುವಿನ ಸ್ವಲ್ಪ ದ್ರವ್ಯರಾಶಿ ಕಣ್ಮರೆಯಾಗುತ್ತದೆ. ಈ ಕಣ್ಮರೆಯಾದ ದ್ರವ್ಯರಾಶಿಯೇ ಪರಮಾಣು ಶಕ್ತಿಯಾಗಿ ಮಾರ್ಪಡುತ್ತದೆ. ಈ ಕ್ರಿಯೆಯನ್ನು ನಿಯಂತ್ರಿಸಿದರೆ ಅಣುಶಕ್ತಿಯಾಗುತ್ತದೆ, ನಿಯಂತ್ರಿಸದಿದ್ದರೆ ಬಾಂಬ್ ಆಗುತ್ತದೆ.

ಅಣು ಬಾಂಬ್ ಇರಲಿ, ಅಣು ಶಕ್ತಿಯಿರಲಿ, ಅದಕ್ಕೆ ಉಪಯೋಗವಾಗುವ ಇಂಧನ ವಿಕಿರಣಶೀಲವಾಗಿರಲೇಬೇಕು. ಇವುಗಳೆಂದರೆ ಆಗಾಧ ಪ್ರಮಾಣದ ಅದಿರಿನಲ್ಲಿ ಯುರೇನಿಯಂ-235ನ್ನು ತೆಗೆದು ಬೇರ್ಪಡಿಸಿ ಅದನ್ನು ಶಕ್ತಿ ಉತ್ಪಾದನೆಗೆ ಉಪಯೋಗಿಸಬೇಕು. ಮಾಮೂಲಾಗಿ ವಿಕಿರಣ ಸಾಮರ್ಥ್ಯ ಹೊಂದಿರುವಂತಹ ಮೂಲವಸ್ತುಗಳ ವಿಧಗಳೆಂದರೆ, ಯುರೇನಿಯಂ 238, ಯುರೇನಿಯಂ 235, ಪ್ಲುಟೋನಿಯಂ 239 ಮತ್ತು ಯುರೇನಿಯಂ 233.

ಯುರೇನಿಯಂ-233 ಎಂಬ ಯುರೇನಿಯಂನ ವಿಧವೂ ವಿಕಿರಣಶೀಲವಾಗಿದ್ದು ಇದರಿಂದ ಅಣುಶಕ್ತಿ ಉತ್ಪಾದಿಸಬಹುದು. ಆದರೆ ಇದು ಸ್ವಾಭಾವಿಕವಾಗಿ ಸಿಗುವುದಿಲ್ಲ. ಇದನ್ನು ತಯಾರಿಸಲು ಸಮುದ್ರ ತೀರದಲ್ಲಿ ಹೇರಳವಾಗಿ ಸಿಗುವ ಥೋರಿಯಂ ಬೇಕು. ಈ ಅಂಶವೇ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಂ ಸೇರಿದಂತೆ ಹಲವು ವಿಜ್ಞಾನಿಗಳು ಥೋರಿಯಂ ಉಪಯೋಗದ ಮೇಲೆ ಹೆಚ್ಚು ಸಂಶೋಧನೆ ನಡೆಯಬೇಕು ಎಂದು ಹೇಳಲು ಕಾರಣ. ಥೋರಿಯಂನಿಂದ ಯುರೇನಿಯಂ-233 ಉತ್ಪಾದಿಸುವ ತಂತ್ರಜ್ಞಾನದ ಸಂಶೋಧನೆ ಭಾರತದ ವಿಜ್ಞಾನಿಗಳೆದುರಿಗೆ ಇಂದು ಇರುವ ಸವಾಲಾಗಿದೆ.

ಅಣು ರಿಯಾಕ್ಟರ್-ನಲ್ಲಿ ಯುರೇನಿಯಂ-235 ವಿಭಜನೆಯಾಗುವಾಗ ಅದರಿಂದ ಬಿಡುಗಡೆಯಾಗುವ ನ್ಯೂಟ್ರಾನುಗಳು, ಅದರಲ್ಲಿರುವ ಯುರೇನಿಯಂ-238ರೊಡನೆ ಸೇರಿಕೊಂಡು ಪ್ಲುಟೋನಿಯಂ-239 ಹುಟ್ಟಿಕೊಳ್ಳುತ್ತದೆ. ಪ್ಲುಟೋನಿಯಂ-239 ಬಲುಬೇಗನೇ ವಿದಳನವಾಗುತ್ತದೆ, ಅಲ್ಲದೆ ಅಪಾರ ಶಕ್ತಿಯನ್ನು ಉತ್ಪಾದಿಸುತ್ತದೆ. ಹಾಗಾಗಿ ಇದು ಬಾಂಬ್ ತಯಾರಿಸಲು ಹೇಳಿ ಮಾಡಿಸಿದ ಮೂಲವಸ್ತು. ಯಾವುದೇ ರಾಷ್ಟ್ರವಾಗಲಿ, ಬಾಂಬ್ ತಯಾರಿಸಬೇಕಾದರೆ ಪ್ಲುಟೋನಿಯಂ-239 ಬೇಕು. ಆದರೆ ಪ್ಲುಟೋನಿಯಂ-239 ಪ್ರತ್ಯೇಕವಾಗಿ ತಯಾರಿಸುವ ಪ್ರಕ್ರಿಯೆ ಹೆಚ್ಚು ವೆಚ್ಚದಾಯಕವಾದ ಕಾರಣ, ಅಣುಶಕ್ತಿ ಉತ್ಪಾದಿಸುವಾಗ ಉಪಉತ್ಪನ್ನವಾಗಿ ಪ್ಲುಟೋನಿಯಂ-239 ಉತ್ಪಾದನೆಯಾಗುತ್ತದೆ, ಇದನ್ನು ಬಾಂಬ್ ತಯಾರಿಕೆಗೆ ಉಪಯೋಗಿಸುವುದು ECONOMICALLY WORKOUT ಆಗುತ್ತದೆ.

ಕೆಡಿಸಿದ ಮೇಲೆ ಬುದ್ಧಿ ಕಲಿತ ಅಮೆರಿಕಾ?

ಇವೆಲ್ಲ ಕಾರಣದಿಂದಾಗಿ, ಅಣುಶಕ್ತಿ ಎಲ್ಲೆಲ್ಲಿ ಉತ್ಪಾದನೆಯಾಗುತ್ತದೋ ಅಲ್ಲಿ ಬಾಂಬ್-ಗೆ ಬೇಕಾದ ಕಚ್ಚಾವಸ್ತು ಕೂಡ ಉತ್ಪತ್ತಿಯಾಗುತ್ತದೆಂಬುದು ವಿಶ್ವದೆಲ್ಲೆಡೆ ಗೊತ್ತಿರುವ ಸತ್ಯ. ಅಣುಶಕ್ತಿ ಸ್ಥಾವರವಿದ್ದಲ್ಲಿ ಬಾಂಬ್ ತಯಾರಿಸುವ ಇಚ್ಛೆಯಿರುವವರಿಗೆ ಸುಲಭವಾಗುತ್ತದೆ. ಯಾವುದೇ ರಾಷ್ಟ್ರ ಅಣುಶಕ್ತಿಯನ್ನು ಉತ್ಪಾದಿಸುತ್ತದೆಂದಾದರೆ, ಅದಕ್ಕೆ ಅಣುಬಾಂಬ್ ತಯಾರಿಸುವ ಎಲ್ಲಾ ಸಾಮರ್ಥ್ಯವಿರುತ್ತದೆ. ಮತ್ತು ಅಗತ್ಯವಾದ ವಸ್ತುಗಳು ಅದರ ನಿಲುಕಿನಲ್ಲೇ ಇರುತ್ತವೆಂದು ಅರ್ಥ.

ಜಾಗತಿಕ ಭಯೋತ್ಪಾದನೆ ಮತ್ತು PARTY-SPONSORED TERRORISM ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ, ಅಣುಬಾಂಬ್ ತಯಾರಿಸಲು ಬೇಕಾದ ಕಚ್ಚಾವಸ್ತುಗಳು ಆಕಸ್ಮಿಕವಾಗಿ ಅಥವಾ ಯಾವುದೇ ರೀತಿಯಲ್ಲಿ ಭಯೋತ್ಪಾದಕರಿಗೆ ದೊರೆಯುವಂತಾದರೆ, ಅಣುಬಾಂಬ್ ತಯಾರಿಸಲು ಕಷ್ಟವಿಲ್ಲ. ಅದರ ಪರಿಣಾಮ ನಿರಂತರ ಹಾನಿಯುಂಟಾಗಬಹುದು.

ಇಷ್ಟೆಲ್ಲಾ ಆಗದೇ ಇದ್ದರೂ, ಅಣು ಸ್ಥಾವರಗಳಲ್ಲಿ, ಅಥವಾ ಅಣು ಬಾಂಬ್ ಇದ್ದಲ್ಲಿ ಆಕಸ್ಮಿಕವಾಗಿ ಬೇರೆ ರೀತಿಯ ಸ್ಫೋಟಗಳಾದರೂ ಅದು ಸರ್ವನಾಶಕ್ಕೆ ಕಾರಣವಾಗಬಹುದು. ಅಣ್ವಸ್ತ್ರ ಹೊಂದಿರುವ ರಾಷ್ಟ್ರಗಳು ಪರಿಣಾಮದ ಬಗೆಗೆ ಯೋಚಿಸದೆ ಅವನ್ನು ಪ್ರಯೋಗಿಸುವ ದಿನ ಬಂದರಂತೂ, ಅಪಾಯ ಕಟ್ಟಿಟ್ಟ ಬುತ್ತಿ. ಮಾಮೂಲು ಬಾಂಬಿನಂತೆ ಅಣುಬಾಂಬನ್ನು ಡಿಫ್ಯೂಸ್ ಮಾಡಲಾಗುವುದಿಲ್ಲ, ಹಾಗಾಗಿ ಒಂದು ಬಾರಿ ಒಂದು ಬಾಂಬ್ ಸಿದ್ಧವಾಯಿತೆಂದರೆ, ಅದನ್ನು ಸಿಡಿಸುವುದೇ ಅದರ ನಾಶಕ್ಕಿರುವ ದಾರಿ. (ಬೇರೇನಾದರೂ ದಾರಿ ಇದೆಯಾ ಅನ್ನುವುದು ನನ್ನ ಗಮನಕ್ಕೆ ಬಂದಿಲ್ಲ, ಬಂದಿದ್ದರೆ ದಯವಿಟ್ಟು ತಿಳಿಸಿ)

ಎರಡು ಸಾರಿ ಜಪಾನ್ ಮೇಲೆ ಅಣುಬಾಂಬ್ ಸಿಡಿಸಿ ಚರಿತ್ರೆಯ ಕರಾಳಪುಟಗಳಲ್ಲಿ ಸ್ಥಾನಪಡೆದ ಅಮೆರಿಕಾ, ವಿಮಾನದಾಳಿಯ ಮೂಲಕ ಒಂದುಸಾರಿ ಜಾಗತಿಕ ಭಯೋತ್ಪಾದನೆಗೂ ಬಲಿಯಾಗಿದೆ. ಯಾವ ದೇಶವನ್ನೂ ಕಡಿಮೆಯೆಂದು ತಿಳಿದುಕೊಳ್ಳದೆ ಬೇಹುಗಾರಿಕೆ ನಡೆಸುತ್ತಲೇ ಇರುವ ಅಮೆರಿಕಾ ತನ್ನ ಹಾಗೆ ಬೇರ್ಯಾರೂ ಮಾಡಬಾರದೆಂದು ಮುನ್ನೆಚ್ಚರಿಕೆ ವಹಿಸುತ್ತಿದೆ. ಇದಕ್ಕಾಗಿಯೇ, ಭಾರತ ಅಮೆರಿಕಾದೊಡನೆ ಸಹಿ ಹಾಕಿರುವ 1-2-3 ನಾಗರಿಕ ಅಣು ಒಪ್ಪಂದದಲ್ಲಿ, ಅಣುಶಕ್ತಿ ಉತ್ಪಾದಿಸುವ ರಿಯಾಕ್ಟರುಗಳು ಅಂತಾರಾಷ್ಟ್ರೀಯ ವೀಕ್ಷಕರ ವೀಕ್ಷಣೆಗೆ ತೆರೆದುಕೊಳ್ಳಲು ಬದ್ಧವಾಗಿರಬೇಕೆಂಬ ನಿಯಮವನ್ನು ಇಡಲಾಗಿದೆ. ಜತೆಗೆ, ಪೂರೈಕೆಯಾಗುವ ಯುರೇನಿಯಂನ ಪ್ರತಿ ಗ್ರಾಂಗೂ ಲೆಕ್ಕ ಕೊಡಬೇಕಾಗುತ್ತದೆ. ಈ ಮೂಲಕ ಅಲ್ಲಿ ಅಣುಶಕ್ತಿ ಮಾತ್ರ ಉತ್ಪಾದನೆಯಾಗುವಂತೆ ನೋಡಿಕೊಳ್ಳುವುದು, ಅಣುಬಾಂಬ್ ಸಂಬಂಧಿತ ಕೆಲಸಕಾರ್ಯಗಳು, ಕಚ್ಚಾವಸ್ತುವಿನ ಸಂಗ್ರಹಣೆ ಇತ್ಯಾದಿ ನಡೆಯದಂತೆ ನೋಡಿಕೊಳ್ಳುವುದು ಈ ನಿಯಮದ ಗುರಿಯಾಗಿದೆ. (ಈ ನಿಯಮಗಳನ್ನೆಲ್ಲ ಅಮೆರಿಕಾ ಎಷ್ಟು ಗುಟ್ಟಾಗಿ ಇಟ್ಟಿದೆಯೆಂದರೆ, ಗೂಗಲ್-ನಲ್ಲಿ ಹುಡುಕಿದರೂ ಇವೆಲ್ಲ ಸಿಗುವುದಿಲ್ಲ) ಒಂದು ವೇಳೆ ನಿಯಮ ಮೀರಿ ಅಣ್ವಸ್ತ್ರವನ್ನು ತಯಾರಿಸಿದರೆ ಅಥವಾ ಪರೀಕ್ಷೆಗಳನ್ನು ನಡೆಸಿದರೆ, ಅಣು ಇಂಧನ ಪೂರೈಕೆ ರಾಷ್ಟ್ರಗಳಿಂದ ಭಾರತಕ್ಕೆ ಸಿಗುವ ಯುರೇನಿಯಂ ಪೂರೈಕೆ ನಿಂತು ಹೋಗಿ, ಭಾರತ ಕಾಣುತ್ತಿರುವ 35 ಶೇಕಡಾ ಅಣುಶಕ್ತಿಯ ಕನಸು ಭಗ್ನವಾಗುತ್ತದೆ.

ಮನುಕುಲ ಮರೆತಿದೆಯೇ ಅನುಭವದ ಕಹಿಪಾಠ?

ಇಂದು ಅಮೆರಿಕಾ ಏನೇ ಮಾಡಲಿ, 1945ರಲ್ಲಿ ಅದು ಜಪಾನ್ ಮೇಲೆ ಮಾಡಿದ ಅಣುಬಾಂಬ್ ದಾಳಿಯ ಪರಿಣಾಮ ಇಂದು ಕೂಡ ಜಪಾನ್ ಜನತೆ ಅನುಭವಿಸುತ್ತಿದೆ. ಅಂಗವಿಕಲತೆಯಿಂದ, ಬುದ್ಧಿಮಾಂದ್ಯತೆಯಿಂದ, ದೈಹಿಕ ವೈಪರೀತ್ಯಗಳಿಂದ ಹುಟ್ಟಿದ ಪೀಳಿಗೆ 'ಹಿಬಾಕುಶಾ' ಅಮೆರಿಕಾದ ಕ್ರೌರ್ಯಕ್ಕೆ ಇಂದಿಗೂ ಸಾಕ್ಷಿ ಹೇಳುತ್ತಿದೆ. ಇಂದು ಕೂಡ, ಜಾಗತಿಕ ಸ್ಥಿತಿಗತಿಯನ್ನು ಅವಲೋಕಿಸಿದರೆ, ಪರಿಸ್ಥಿತಿ ಅಣುಬಾಂಬ್ ಸಿಡಿಸುವಷ್ಟು ಮೂರ್ಖರಾಷ್ಟ್ರಗಳು ಇಲ್ಲವೆಂದು ಹೇಳುವಷ್ಟೇನೂ ಸುಂದರವಾಗಿಲ್ಲ.

ಭಾರತದಲ್ಲೂ ಎಲ್ಲಾ ಅಣುಸ್ಥಾವರಗಳಿಗೂ ಅಣು ಒಪ್ಪಂದ ಅನ್ವಯವಾಗುವುದಿಲ್ಲವಾದ್ದರಿಂದ, ಈಗಲೂ ಭಾರತ ತನ್ನದೇ ಯುರೇನಿಯಂ ಮೂಲಗಳನ್ನು ಹುಡುಕಿ ಅಣುಶಕ್ತಿಯ ಜತೆಗೆ ಬಾಂಬ್ ತಯಾರಿಸಬಹುದು. ಈ ಹೆದರಿಕೆ ಇಂದಿಗೂ ಅಮೆರಿಕಾಕ್ಕಿದೆ, ಅದು ಭಾರತಕ್ಕೂ ಗೊತ್ತಿದೆ.

ಆಮೇಲೆ 1986ರಲ್ಲಿ ರಷ್ಯಾದಲ್ಲಾದ ಚೆರ್ನೋಬೈಲ್ ದುರಂತ, ನಾಗರಿಕ ಉಪಯೋಗಕ್ಕೆಂದು ಅಣುಶಕ್ತಿಯ ಬಳಕೆ ಮಾಡಹೊರಟರೂ ಜಾಗರೂಕತೆಯಿಲ್ಲದಿದ್ದಲ್ಲಿ ಅಪಾಯಗಳುಂಟಾಗಬಹುದೆಂದು ತೋರಿಸಿಕೊಟ್ಟಿತು. ಈ ರೀತಿಯ ಅಜಾಗರೂಕತೆಗಳಾಗದಷ್ಟು ಎಚ್ಚರ ನಮ್ಮ ಅಣುಸ್ಥಾವರಗಳಲ್ಲಿನ್ನೂ ಜಾರಿಗೆ ಬಂದಿಲ್ಲ ಎನ್ನುತ್ತಾರೆ ತಿಳಿದವರು. ಯುನಿಫಾರ್ಮ್ ಧರಿಸದೆ, ಜಾಗರೂಕತೆ ಕ್ರಮಗಳನ್ನು ಕೈಗೊಳ್ಳದೆ ಕೆಲಸಮಾಡುವುದು ಇಂದಿಗೂ ಭಾರತದ ಸ್ಥಾವರಗಳಲ್ಲಿ ನಡೆದಿದೆ. ಕಲ್ಪಾಕಂ ಅಣುಸ್ಥಾವರದಲ್ಲಿ ನೀರು ಸರಾಗವಾಗಿ ಹರಿಯದೆ ಉಷ್ಣತೆ ಏರಿದ ಪ್ರಕರಣ ಕೂಡ ಒಮ್ಮೆ ನಡೆದಿತ್ತು ಎನ್ನಲಾಗುತ್ತದೆ.

ಒಂದು ವೇಳೆ ಅಣುಬಾಂಬ್ ತಯಾರಾಗದೇ ಇದ್ದರೂ, ಅಣುಸ್ಥಾವರಗಳಲ್ಲಿ ಏನು ಸಂಭವಿಸುತ್ತಿದೆಯೆಂದು ಮಾಮೂಲಾಗಿ ಜನಸಾಮಾನ್ಯರಿಗೆ ತಿಳಿಯುವುದಿಲ್ಲ. ಯಾಕೆಂದರೆ ಅಣುಸ್ಥಾವರಗಳು ಅತಿಭದ್ರತೆಯ ಪ್ರದೇಶಗಳಾಗಿದ್ದು, ಸಾಮಾನ್ಯರಿಗೆ ಯಾವ ಮಾಹಿತಿಯನ್ನೂ ತೆರೆದಿಡಲಾಗುವುದಿಲ್ಲ. ಭೂಕಂಪವಾದರೆ ನೆಲ ನಡುಗುತ್ತದೆ, ನೆರೆ ಬರುವುದಿದ್ದರೆ ಸೂಚನೆ ಸಿಗುತ್ತದೆ, ಚಂಡಮಾರುತ, ಸುನಾಮಿ, ಹೀಗೆ ಏನೇ ಆಗಲಿದ್ದರೂ ಅದು ಮೊದಲೇ ತಿಳಿಯಲಿಕ್ಕೊಂದು ವ್ಯವಸ್ಥೆಯಿರುತ್ತದೆ. ಆದರೆ, ಕಣ್ಣಿಗೆ ಕಾಣದ ಅಣುವಿಕಿರಣ ಸೂಸಲು ಆರಂಭವಾಯಿತೆಂದರೆ, ವರ್ಷಗಟ್ಟಲೆ ಕಾಲ ತಿಳಿಯದಿರಬಹುದು, ಆಗಬಾರದ್ದು ಆಗಿಹೋಗಬಹುದು, ಮುಂದಿನ ಪೀಳಿಗೆಗಳು ಅದರಿಂದ ಬಾಧಿಸಲ್ಪಡಬಹುದು.

ಅಣು ಒಪ್ಪಂದವಾದ ಬೆನ್ನಲ್ಲೇ ತಾವೂ ಅಣುಸ್ಥಾವರ ಸ್ಥಾಪಿಸುತ್ತೇವೆಂದು ಮುಗಿಬಿದ್ದಿರುವ ಖಾಸಗಿ ಕಾರ್ಪೊರೇಟ್ ದಿಗ್ಗಜಗಳು, ಈಗಿರುವ ನಿಯಮಾವಳಿಗಳಲ್ಲಿ ಸೂಕ್ತ ಬದಲಾವಣೆ ತಂದು ಖಾಸಗಿಯವರಿಗೆ ಅವಕಾಶ ಕಲ್ಪಿಸಹೊರಟಿರುವ ಸರಕಾರ, ಬಾಂಬ್ ತಯಾರಿಸಲು ಅವಕಾಶವಿಲ್ಲ ಎನ್ನುವ ಒಂದೇ ಕಾರಣಕ್ಕೆ ಅಣುಒಪ್ಪಂದವನ್ನು ವಿರೋಧಿಸುತ್ತಲೇ ಬಂದಿರುವ ವಿರೋಧಪಕ್ಷ, ಬದಲಾಗುತ್ತಿರುವ ಜಗತ್ತಿನಲ್ಲಿ ತಮ್ಮ ಮೂಲ ನಿಲುವನ್ನು ಉಳಿಸಿಕೊಳ್ಳಲಾಗದೆ, ಸರಿ-ತಪ್ಪು ನಿರ್ಧರಿಸಲಾಗದೆ ಒದ್ದಾಡುತ್ತಿರುವ ಎಡಪಕ್ಷಗಳು - ಒಟ್ಟಿನಲ್ಲಿ ಇಂದು ನಮ್ಮ ದೇಶದಲ್ಲಿ ನಡೆಯುತ್ತಿರುವುದನ್ನು ನೋಡಿದರೆ, ಚರಿತ್ರೆ ದಾಖಲಿಸಿರುವ ಕಹಿಪಾಠಗಳನ್ನು ನಾವು ಮರೆತಿರುವುದು ಸ್ಪಷ್ಟ. ಅಣುಬಾಂಬ್ ಬೇಕೋ ಬೇಡವೋ, ಅಣುಶಕ್ತಿ ಇಂದು ಎಲ್ಲರಿಗೂ ಬೇಕು, ಅದು ಜೀವವಿರೋಧಿಯೆಂಬ ಸತ್ಯವನ್ನು ಬೇಕೆಂದೇ ಮರೆತುಬಿಡಲಾಗಿದೆ.

ನಮ್ಮ ರಾಜ್ಯದಲ್ಲಿ, ರಾಷ್ಟ್ರದಲ್ಲಿ ಮತ್ತು ಜಾಗತಿಕ ಮಟ್ಟದಲ್ಲಿ ಎಲ್ಲಾ ರಾಜಕಾರಣಿಗಳು ಮತ್ತು ಸರಕಾರಗಳು ಅಣುಶಕ್ತಿಯಿಂದಾಗಬಹುದಾದ ಎಲ್ಲಾ ರೀತಿಯ ಅನಾಹುತಗಳನ್ನು ಮನಗಾಣುವುದು ಸಾಧ್ಯವಾದಾಗ ಮಾತ್ರ, ನಮ್ಮ ನಾಳೆಗಳು ಹಾಳಾಗುವ ಸಾಧ್ಯತೆ ಕಡಿಮೆಯಾಗುತ್ತದೆ, ಇತರ ಶಕ್ತಿಮೂಲಗಳೆಡೆಗೆ ಕಣ್ಣು ಹಾಯಿಸುವಲ್ಲಿ ಇಚ್ಛಾಶಕ್ತಿ ಬೆಳೆಯುತ್ತದೆ, ಚಂದದ ನಾಳೆಗಳಿಗದು ಭಾಷ್ಯವಾಗುತ್ತದೆ. ಇದೊಂದು ಕನಸು, ಇದು ನನಸಾಗುವುದೇ?

(ಮಾಹಿತಿ ಕೃಪೆ: ಶ್ರೀ ಸತ್ಯಜಿತ್ ಕೆ.ಟಿ., ಶ್ರೀ ನಾಗೇಶ್ ಹೆಗಡೆ, ವಿಕಿಪೀಡಿಯಾ, ಗೂಗಲ್)

Sunday, August 17, 2008

ಹೊಗೇನಕಲ್ ಬೆನ್ನು ಹತ್ತಿ...


ಹೊಗೇನಕಲ್ - ಭೂಮಿ ಮೇಲೊಂದು ಸ್ವರ್ಗ!

“ನೀ ಮೆಟ್ಟುವ ನೆಲ ಅದೆ ಕರ್ನಾಟಕ, ನೀ ಕುಡಿಯುವ ನೀರ್ ಕಾವೇರೀ...” ಎಂದು ರಾಷ್ಟ್ರಕವಿ ಕುವೆಂಪು ಹಾಡುವಷ್ಟರ ಮಟ್ಟಿಗೆ ಕನ್ನಡತನದೊಡನೆ ನಂಟು ಬೆಳೆಸಿದ್ದಾಳೆ ಕಾವೇರಿ. ಕೊಡಗಿನ ತಲಕಾವೇರಿಯಿಂದ ತಮಿಳುನಾಡಿನ ಶ್ರೀರಂಗಂವರೆಗೆ ಹರಿದು ಬಂಗಾಳಕೊಲ್ಲಿಯಲ್ಲಿ ಕಡಲಿನೊಡಲು ಸೇರುವ ಈಕೆ, ಅದಕ್ಕೂ ಮುನ್ನ ಕರ್ನಾಟಕ – ತಮಿಳುನಾಡು - ಕೇರಳ ರಾಜ್ಯಗಳಲ್ಲಿ ಸುಮಾರು 780 ಕಿ.ಮೀ. ದೂರದುದ್ದಕ್ಕೂ ಜೀವದಾಯಿನಿಯಾಗಿ ಹರಿಯುತ್ತಾಳೆ. ಚಿತ್ರ-ವಿಚಿತ್ರವಾಗಿ ಮನಬಂದಂತೆ ಹರಿದು, ದ್ವೀಪಗಳನ್ನು ಸೃಷ್ಟಿಸುತ್ತ, ಜಲಪಾತವಾಗಿ ಧುಮ್ಮಿಕ್ಕುತ್ತ ರಮಣೀಯವಾಗಿ ಕಂಗೊಳಿಸುತ್ತಾಳೆ. ಕಾವೇರಿ ಸೃಷ್ಟಿಸಿದ ಇಂತಹ ರಮಣೀಯ ತಾಣಗಳಲ್ಲಿ ಹೊಗೇನಕಲ್ ಒಂದು.

ಭಾರತದ ನಯಾಗರವೆಂದು ಪ್ರಸಿದ್ಧವಾದ ಹೊಗೆನಕಲ್ ಇರುವುದು ಬೆಂಗಳೂರಿನಿಂದ ಸುಮಾರು 140 ಕಿಲೋಮೀಟರ್ ದೂರದಲ್ಲಿ. ಇಲ್ಲಿ ಇಡೀ ವಿಶ್ವದಲ್ಲಿಯೇ ಪ್ರಾಚೀನವೆನಿಸಿದ ಕಾರ್ಬೋನೇಟ್ ಬಂಡೆಗಳದ್ದೇ ಸಾಮ್ರಾಜ್ಯ. ಸುಮಾರು 20 ಮೀಟರ್ ಎತ್ತರದಿಂದ ನೀರು ಬಂಡೆಗಳ ಮೇಲೆ ಧುಮ್ಮಿಕ್ಕುವಾಗ ಆ ರಭಸಕ್ಕೆ ನೀರಿನ ಹನಿಗಳು ಸತತವಾಗಿ ಮೇಲೆ ಚಿಮ್ಮುತ್ತಿರುತ್ತವೆ. ದೂರದಿಂದ ನೋಡುವಾಗ ಹೊಗೆಯಂತೆ ಇದು ಕಾಣುತ್ತದೆ, ಅದಕ್ಕೇ ಹೊಗೇನಕಲ್ ಎಂಬ ಹೆಸರು ಬಂದಿರಬೇಕು.

ತಮಿಳುನಾಡು ಈ ಪ್ರದೇಶವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸಿದೆ. ಇಲ್ಲಿ ತೂಗುಸೇತುವೆ, ವೀಕ್ಷಣಾ ಗೋಪುರ ನಿರ್ಮಿಸಿದೆ. ಅಷ್ಟೇ ಅಲ್ಲ, ತನ್ನ ವೆಬ್-ಸೈಟ್-ಗಳಲ್ಲಿ ಹೊಗೇನಕಲ್ಲನ್ನು ತನ್ನಲ್ಲಿರುವ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದೆಂದು ಬಿಂಬಿಸುತ್ತಿದೆ. ಹೊಗೇನಕಲ್-ಗೆ ಹೋಗುವ ಹೆಚ್ಚಿನವರು ತಮಿಳುನಾಡು ಮೂಲಕವೇ ಹೋಗುತ್ತಾರೆ. ಅದೇ ಕರ್ನಾಟಕದ ಭಾಗದಲ್ಲಿ ಏನೇನೂ ಇಲ್ಲ. ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಎಂದೂ ಹೊಗೇನಕಲ್ಲನ್ನು ತನ್ನದೆಂದು ಹೇಳಿಕೊಂಡ ಉದಾಹರಣೆಯಿಲ್ಲ.

ಹೊಗೇನಕಲ್ ವಿವಾದ...

1998ರಲ್ಲಿ ಕರ್ನಾಟಕ-ತಮಿಳುನಾಡು ಕುಡಿಯುವ ನೀರಿನ ವಿವಾದ ಪರಿಹಾರದ ನಿಟ್ಟಿನಲ್ಲಿ ಕೇಂದ್ರ ಜಲಸಂಪನ್ಮೂಲ ಸಚಿವಾಲಯ, ಉಭಯ ರಾಜ್ಯಗಳ ಪ್ರತಿನಿಧಿಗಳ ಸಭೆ ಕರೆದಿತ್ತು. ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವ ಯೋಜನೆಯನ್ನು ಕರ್ನಾಟಕ ಸರ್ಕಾರ ಮೇಕೆದಾಟುವಿನಲ್ಲಿ, ಹಾಗೂ ಧರ್ಮಪುರಿ ಮತ್ತು ಕೃಷ್ಣಗಿರಿಗೆ ಕುಡಿಯುವ ನೀರು ಒದಗಿಸುವ ಯೋಜನೆಯನ್ನು ತಮಿಳುನಾಡು ಸರ್ಕಾರ ಹೊಗೇನಕಲ್ಲಿನಲ್ಲಿ ಕೈಗೆತ್ತಿಕೊಳ್ಳುವ ನಿರ್ಧಾರಕ್ಕೆ ಈ ಸಭೆಯಲ್ಲಿ ಬರಲಾಗಿತ್ತು. ಇದಕ್ಕೆ ಉಭಯ ರಾಜ್ಯಗಳೂ ಒಪ್ಪಿಗೆ ಸೂಚಿಸಿದ್ದವು. ಇವೆಲ್ಲದಕ್ಕೂ ಕೇಂದ್ರದ ಅನುಮೋದನೆ ಕೂಡ ದೊರೆತಿತ್ತು. ಆಗ ನಡೆದ ಒಪ್ಪಂದದ ಪ್ರಕಾರ, ತಮಿಳುನಾಡು ಕುಡಿಯುವ ನೀರಿಗೆ ಜಾಕ್ ವೆಲ್ ಅಥವಾ ಏತ ನೀರಾವರಿಯ ಮೂಲಕ ನೀರು ಪಡೆಯಬೇಕು ಎಂದಾಗಿತ್ತು.
2008ರ ಫೆಬ್ರವರಿ ತಿಂಗಳಲ್ಲಿ ತಮಿಳುನಾಡು ಹೊಗೇನಕಲ್-ನಲ್ಲಿ ಕುಡಿಯುವ ನೀರಿನ ಯೋಜನೆಗೆ ಶಿಲಾನ್ಯಾಸ ಮಾಡಿತು. ಕನ್ನಡದ ನೆಲದಲ್ಲಿ ಅಣೆಕಟ್ಟು ಕಟ್ಟಿ ಕುಡಿಯುವ ನೀರನ್ನು ತಮಿಳುನಾಡಿಗೆ ಸಾಗಿಸುತ್ತಾರೆಂಬ ಗಾಳಿಮಾತೇ ವಿವಾದಕ್ಕೆ ಕಾರಣವಾಯಿತು.

ಖನ್ನಢದ ಉಟ್ಟು ಓರಾಠಗಾರರೆಲ್ಲ ಖನ್ನಡದ ನೆಲ-ಜಲ ಅಂತ ಹೋರಾಟ ಮಾಡುವಾಗ ರಾಜಕಾರಣಿಗಳು ತೆಪ್ಪಗೆ ಕೂರಲಾದೀತೇ? ಅವರೂ ತಲೆಗೊಂದು ಮಾತಾಡಿದರು. ಚುನಾವಣೆಗೆ ಮುಂಚೆ ಯಡಿಯೂರಪ್ಪ ಹೊಗೇನಕಲ್ಲಿಗೇ ಹೋಗಿ ಸಮೀಕ್ಷೆ ನಡೆಸಿ ಬಂದರು. ಅಲ್ಲಿನ ನಿಜ ಪರಿಸ್ಥಿತಿ ಅವರಿಗೆ ಅರ್ಥವಾಯಿತೋ ಇಲ್ಲವೋ ಗೊತ್ತಿಲ್ಲ, ಆದರೆ ಆ ಸಮಯದ ಅವರ ಹೇಳಿಕೆಗಳು ಮಾತ್ರ ಇರಬೇಕಾದ ಪ್ರಬುದ್ಧ ಮಟ್ಟದಲ್ಲಿ ಇರಲಿಲ್ಲ.

ಕಾರಣಗಳೇನೋ ಗೊತ್ತಿಲ್ಲ, 1998ರಲ್ಲಿ ಅನುಮತಿ ಸಿಕ್ಕರೂ, ತಮಿಳುನಾಡು ಈ ಯೋಜನೆ ಕೈಗೆತ್ತಿಕೊಳ್ಳುವಲ್ಲಿ ತಡವಾಗಿದ್ದಂತೂ ನಿಜ. ಇಷ್ಟರವರೆಗೆ ಇಲ್ಲದ್ದು ಈಗ ಯಾಕೆ ಎಂಬ ಪ್ರಶ್ನೆಗೆ ಈ ವಿಳಂಬ ಕಾರಣವಾಯಿತು. ಆದರೆ, ನಿಜವಾಗಿ ಹೇಳಬೇಕೆಂದರೆ, ಈ ಯೋಜನೆ ಎಲ್ಲಿ ಆಗುತ್ತದೆ, ಯಾವ ರೀತಿ ಮಾಡುತ್ತಾರೆ, ಏನು ಮಾಡುತ್ತಾರೆ ಅಂತೆಲ್ಲ ಸತ್ಯಾನ್ವೇಷಣೆ ಮಾಡಹೊರಟವರು ಇಲ್ಲವೆಂದೇ ಹೇಳಬೇಕು.

ಕುಡಿಯುವ ನೀರು ಯಾಕೆ

ಕೃಷ್ಣಗಿರಿ, ಧರ್ಮಪುರಿ ಜಿಲ್ಲೆಗಳಲ್ಲಿನ ಅಂತರ್ಜಲ ಅತ್ಯಧಿಕ ಪ್ರಮಾಣದ ಫ್ಲೋರೈಡ್ ಅಂಶ ಹೊಂದಿದೆ. 1.5 ಗ್ರಾಮಿಗಿಂತ ಅಧಿಕ ಫ್ಲೋರೈಡ್ ಅಂಶವುಳ್ಳ ನೀರು ಸೇವನೆಗೆ ಅರ್ಹವಲ್ಲ, ಆದರೆ ಇಲ್ಲಿನ ಪ್ರತಿ ಲೀಟರ್ ನೀರಿನಲ್ಲಿ 9.0 ಗ್ರಾಂನಷ್ಟು ಫ್ಲೋರೈಡ್ ಅಂಶವಿದೆ.

ನೀರಿನ ವಿಷಯದಲ್ಲಿ ತಮಿಳುನಾಡಿನ ಜನಕ್ಕಿರುವುದು ಪೂಜ್ಯ ಭಾವನೆ. ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ ಅಂಧಾಭಿಮಾನ. ತಾವು ಕುಡಿಯುವ ನೀರಲ್ಲಿ ಫ್ಲೋರೈಡ್ ಇದೆಯೆಂಬುದರ ಬಗ್ಗೆ ತಲೆಯೇ ಕೆಡಿಸಿಕೊಳ್ಳದ ಇವರು, ಈ ನೀರು ಸೇವಿಸುವುದರಿಂದಲೇ ಆರೋಗ್ಯ ಸಮಸ್ಯೆಗಳು ಬರುತ್ತವೆಂದರೆ ನಂಬುವುದಿಲ್ಲ. ನಿನ್ನ ತಾಯನ್ನಾದರೂ ಪರೀಕ್ಷಿಸು, ಆದರೆ ನೀರನ್ನು ಮಾತ್ರ ಪರೀಕ್ಷಿಸುವಂತಿಲ್ಲ ಅನ್ನುತ್ತಾರೆ ತಮಿಳುನಾಡಿನ ಜನ.

ಕೃಷ್ಣಗಿರಿಯ ಊರೊಂದರಲ್ಲಿ ಕಾಲಿಟ್ಟರೆ, ಕಾಣಸಿಗುತ್ತಾರೆ - ಹಲ್ಲು ಹಳದಿಯಾದ, ಸಪೂರವಾದ ಸೊಟ್ಟ ಕಾಲುಗಳ ನೂರಾರು ಜನ. ಮಲ್ಲಿಗೆ ಬೆಳೆಯುತ್ತ ಜೀವನ ಸಾಗಿಸುತ್ತಾರಿವರು. ಈಗಾಗಲೇ ಕೃಷ್ಣಗಿರಿಯ 60%ದಷ್ಟು ಜನ ಫ್ಲೋರೋಸಿಸ್-ಗೆ ಬಲಿಯಾಗಿದ್ದಾರೆ. ಈ ಎರಡು ಜಿಲ್ಲೆಗಳಿಗೆ ಈಗ ಶುದ್ಧ ಕುಡಿಯುವ ನೀರು ನೀಡದಿದ್ದರೆ ಮುಂದಿನ ತಲೆಮಾರೆಲ್ಲ ಫ್ಲೋರೋಸಿಸ್ ಬಾಧೆಗೊಳಗಾಗಬಹುದು. ಶುದ್ಧ ಕುಡಿಯುವ ನೀರು ಈ ಜನರ ಅವಶ್ಯಕತೆ. ಅದನ್ನೊದಗಿಸುವುದು ತಮಿಳುನಾಡು ಸರಕಾರದ ಜವಾಬ್ದಾರಿ.

ಈ ಯೋಜನೆಗೆ ಕರ್ನಾಟಕದ ವಿರೋಧದ ಅಗತ್ಯವಿಲ್ಲ – ಯಾಕೆಂದರೆ,

1) ಸುಪ್ರೀಂಕೋರ್ಟ್ ಹೇಳುವ ಪ್ರಕಾರ, ಕುಡಿಯುವ ನೀರಿನ ಯೋಜನೆಗೆ ನೀರಿಗೆ ಸಂಬಂಧಿಸಿದ ಯೋಜನೆಗಳಲ್ಲಿ ಗರಿಷ್ಟ ಆದ್ಯತೆ. ಹಾಗಾಗಿ, ತಾಂತ್ರಿಕವಾಗಿ ತಮಿಳುನಾಡಿಗೆ ಅಡ್ಡಿಯೊಡ್ಡುವ ಹಕ್ಕು ಕರ್ನಾಟಕಕ್ಕಿಲ್ಲ. 30 ಲಕ್ಷ ಜನರಿಗೆ ಕುಡಿಯುವ ನೀರು ದೊರಕಿಸುವ ಈ ಯೋಜನೆಗೆ ಯಾರೂ ಅಡ್ಡಿ ಬರುವಂತಿಲ್ಲ.

2) ಹೊಗೇನಕಲ್ಲಿನಲ್ಲಿ ಮಾಡಹೊರಟಿರುವುದು ಏತ ನೀರಾವರಿ ಯೋಜನೆ. ಅದರಿಂದ 2.1 ಟಿಎಂಸಿ ನೀರು ಮಾತ್ರ ಎತ್ತಿಕೊಳ್ಳಲು ಅನುಮತಿಯಿದೆ. 2021ನೇ ಇಸವಿಯಲ್ಲಿ ದಿನವೊಂದಕ್ಕೆ 128 ಮಿಲಿಯನ್ ಲೀಟರ್ ನೀರು ಎತ್ತಿಕೊಳ್ಳಲು ಅನುಮತಿಯಿದೆ. 1334 ಕೋಟಿ ರೂಪಾಯಿಗಳಲ್ಲಿ ಜಪಾನ್ ಬ್ಯಾಂಕ್ ಸಹಯೋಗದೊಡನೆ ಎರಡು ನೀರು ಶುದ್ಧೀಕರಣ ಘಟಕಗಳನ್ನು ಹಾಕಿಕೊಂಡು ಧರ್ಮಪುರಿ ಮತ್ತು ಕೃಷ್ಣಗಿರಿಗೆ ನೀರು ಒದಗಿಸಲಾಗುತ್ತದೆ

3) ಇಲ್ಲಿಂದ ಎತ್ತಿಕೊಳ್ಳುವ ನೀರು ತಮಿಳುನಾಡಿನ ಪಾಲಿನದೇ ನೀರು. ಈ ಯೋಜನೆಗಾಗಿ ಕರ್ನಾಟಕ ಹೆಚ್ಚಿನ ನೀರನ್ನೇನೂ ಬಿಡುಗಡೆ ಮಾಡಬೇಕಿಲ್ಲ. ಕಾವೇರಿಯಿಂದ ತಮಿಳುನಾಡಿಗೆ ಬಿಡುಗಡೆಯಾಗುವ ನೀರು ಅಧಿಕೃತವಾಗಿ ಬಿಳಿಗುಂಡ್ಲುವಿನಲ್ಲಿ ಅಳತೆಯಾಗುತ್ತದೆ. ಬಿಳಿಗುಂಡ್ಲುವಿನಿಂದ ಬಿಟ್ಟ ನೀರು ಹೊಗೆನಕಲ್ ಮೂಲಕ ಧುಮುಕಿದರೆ ಸೇರುವುದು ನೇರವಾಗಿ ಮೆಟ್ಟೂರು ಅಣೆಕಟ್ಟಿನ ಹಿನ್ನೀರಿಗೆ. ಅದೆಲ್ಲವೂ ತಮಿಳುನಾಡಿನ ಪಾಲಿನದೇ ಆದ್ದರಿಂದ, ಅದು ಕರ್ನಾಟಕದ ನೀರಾಗುವುದಿಲ್ಲ.

4) ಕಾವೇರಿ ನ್ಯಾಯ ಮಂಡಳಿಯ ಅಂತಿಮ ತೀರ್ಪು ಬರುವವರೆಗೂ ಕರ್ನಾಟಕ ಮೈಸೂರು ಪ್ರಾಂತ್ಯದ ಕಾವೇರಿ ನದಿ ಪಾತ್ರದಲ್ಲಿ ಯಾವುದೇ ಕುಡಿಯುವ ನೀರಿನ ಯೋಜನೆಗಳನ್ನು ಕೈಗೊಳ್ಳಬಾರದೆಂಬುದು ತಮಿಳುನಾಡಿನ ಹಠ. ಒಂದು ವೇಳೆ ಯೋಜನೆ ಕೈಗೊಂಡರೆ ಕಾನೂನು ಪ್ರಕಾರ ತಪ್ಪಾಗುತ್ತದೆ ಎನ್ನುವುದು ಅವರ ವಾದ. ಈ ವಿಚಾರದಲ್ಲಿ ತಮಿಳುನಾಡು ಈಗಾಗಲೇ ಸುಪ್ರೀಂಕೋರ್ಟ್-ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದೆ. ಆ ನೀರಿನಲ್ಲಿ ತಮಿಳುನಾಡಿನ ಪಾಲಿರುವ ಕಾರಣ ಈ ವಾದವನ್ನು ಅಲ್ಲಗಳೆಯುವುದು ಕಷ್ಟ. ಆದರೆ ಹೊಗೇನಕಲ್ಲಿನಲ್ಲಿರುವ ನೀರು ತಮಿಳುನಾಡಿನದೇ ಆಗಿರುವುದರಿಂದ ಕರ್ನಾಟಕ ಇದಕ್ಕೆ ಬೇಡವೆನ್ನಲಾಗದು.

ಹಾಗಾದರೆ, ನಿಜವಾದ ವಿವಾದವಿರುವುದು ಎಲ್ಲಿ?

1. ಹೊಗೇನಕಲ್ ವಿವಾದವಿರುವುದು ನೀರಿನ ಹಂಚಿಕೆಯಲ್ಲಲ್ಲ – ನೆಲದ ಹಂಚಿಕೆಯಲ್ಲಿ. ತನ್ನ ಸಮುದ್ರಾಭಿಮುಖ ಯಾನದಲ್ಲಿ ಕಾವೇರಿ 64 ಕಿಲೋಮೀಟರುಗಳಷ್ಟು ದೂರ, ಕರ್ನಾಟಕ ಮತ್ತು ತಮಿಳುನಾಡು ನಡುವೆ ಗಡಿಯಾಗಿ ಹರಿದಿದ್ದಾಳೆ. ಇದರಲ್ಲಿ 40ನೇ ಕಿಲೋಮೀಟರಿನಲ್ಲಿ ಹೊಗೇನಕಲ್ ಇದೆ. ಪ್ರಕೃತಿ ಸೃಷ್ಟಿಸಿದ ಅದ್ಭುತ ವೈಚಿತ್ರ್ಯವಾದ ಹೊಗೇನಕಲ್ ಪ್ರದೇಶದಲ್ಲಿ, ಭೂಭಾಗದ ಸಂರಚನೆಯಲ್ಲಿರುವ ವೈಶಿಷ್ಟ್ಯ ಕೂಡಾ ವಿವಾದಕ್ಕೆ ಒಂದು ರೀತಿಯಲ್ಲಿ ಕಾರಣ. ಇಲ್ಲಿನ ಭೂಭಾಗ ನಡುಗಡ್ಡೆಯ ರೂಪದಲ್ಲಿ ಎದ್ದು ನಿಂತಿದ್ದರೆ, ಕಾವೇರಿ ಇಕ್ಕೆಲಗಳಲ್ಲಿ ಅದನ್ನು ಬಳಸಿ ಹರಿದು ಧುಮುಕಿದ್ದಾಳೆ. ಈ ನಡುಗಡ್ಡೆ ಯಾರಿಗೆ ಸೇರಿದ್ದು ಎಂಬುದಿನ್ನೂ ನಿರ್ಧಾರವಾಗಿಲ್ಲ. ಇಲ್ಲಿ ಸರಿಯಾದ ಗಡಿರೇಖೆ ಗುರುತಿಸುವ ಕಾರ್ಯ ಇನ್ನೂ ಆಗಿಲ್ಲ.

2. ಹೊಗೇನಕಲ್ ಪ್ರದೇಶದಲ್ಲಿ ಕಾವೇರಿ ನದಿಯೇ ಉಭಯ ರಾಜ್ಯಗಳ ನಡುವಿನ ಗಡಿ. ಆದರೆ ನದಿ ಮಧ್ಯಭಾಗದಲ್ಲಿರುವ ಗಡಿರೇಖೆ ಗುರುತಿಸುವಲ್ಲಿಯೂ ವಿವಾದಗಳಿವೆ. ಅಂತಾರಾಷ್ಟ್ರೀಯ ಮಾರ್ಗದರ್ಶಿ ಸೂತ್ರಗಳ ಪ್ರಕಾರ ನದಿಯ ಆಳವೇ ಗಡಿರೇಖೆ. ಆದರೆ ಎರಡು ಶತಮಾನಗಳ ಕಾಲ ಭಾರತವನ್ನಾಳಿದ ಬ್ರಿಟಿಷರ ಪ್ರಕಾರ ನದಿಯ ಮಧ್ಯಭಾಗವೇ ಗಡಿರೇಖೆ. ಸ್ವತಂತ್ರ ಭಾರತದಲ್ಲಿ ಯಾವುದನ್ನು ಅನುಸರಿಸಬೇಕು ಎಂಬುದು ಇಂದಿಗೂ ಒಂದು ಸಮಸ್ಯೆ. ಗಡಿ ನಿರ್ಧಾರ ಆಗಿಲ್ಲ ಎನ್ನುವುದು ಮಾತ್ರ ಸತ್ಯ, ಅದೇ ಎಲ್ಲಾ ಸಮಸ್ಯೆಗೂ ಮೂಲಕಾರಣ. ಪರಿಹಾರ, ಕೇಂದ್ರ ಸರ್ಕಾರದ ಮುಂದಾಳತ್ವದಿಂದ ಮಾತ್ರ ಸಾಧ್ಯ.

ವಿವಾದಿತ ಯೋಜನೆಗೆ ಶಿಲಾನ್ಯಾಸ ಮಾಡಿದ ಜಾಗದಲ್ಲಿ ಈಗ ಛಿದ್ರಛಿದ್ರವಾದ ಶಿಲೆ ಮಾತ್ರವಿದೆ. ವಿವಾದ ಭುಗಿಲೆದ್ದ ಕೆಲವೇ ದಿನಗಳಲ್ಲಿ ಅದನ್ನು ತಮಿಳುನಾಡಿನ ಅಧಿಕಾರಿಗಳೇ ಒಡೆಸಿ ಹಾಕಿದ್ದಾರೆ. ಹೊಗೇನಕಲ್-ನಿಂದ ಒಂದು ಕಿಲೋಮೀಟರ್ ಹಿಂದೆ ಎರಡೂ ರಾಜ್ಯಗಳ ಗುಡ್ಡಗಳಲ್ಲಿ ಸೀಮೆಸುಣ್ಣದಲ್ಲಿ ಮಾರ್ಕಿಂಗ್ ಮಾಡಿದ್ದು ಕಾಣಸಿಗುತ್ತದೆ. ಈ ಕಡೆ ಕರ್ನಾಟಕದ ಬೆಟ್ಟದಿಂದ ಆರಂಭವಾದ ಮಾರ್ಕಿಂಗ್ ನದಿ ದಾಟಿ ಆಕಡೆ ತಮಿಳುನಾಡಿನ ಗುಡ್ಡದಲ್ಲಿ ಅಂತ್ಯವಾಗುತ್ತದೆ. ಎರಡು ವರ್ಷಗಳ ಹಿಂದೆ ಕೈಗೊಳ್ಳಬೇಕೆಂದು ಹೊರಟಿದ್ದ ಜಲವಿದ್ಯುತ್ ಯೋಜನೆಗಾಗಿ ಎರಡೂ ರಾಜ್ಯಗಳ ಅಧಿಕಾರಿಗಳು ಸಮೀಕ್ಷೆ ನಡೆಸಿ ಮಾಡಿದ ಮಾರ್ಕಿಂಗ್ ಇದು.
ಜಲವಿದ್ಯುತ್ ಯೋಜನೆ

ಹೊಗೇನಕಲ್ ಕುಡಿಯುವ ನೀರಿನ ಯೋಜನೆಯಿಂದ ಅಂತಹ ಹಾನಿಯೇನಿಲ್ಲ. ಆದರೆ, ಜಲವಿದ್ಯುತ್ ಉತ್ಪಾದನೆ ಯೋಜನೆಯೇನಾದರೂ ಜಾರಿಗೆ ಬಂದರೆ ಮಾತ್ರ ಅದರಿಂದ ಸ್ವಲ್ಪಮಟ್ಟಿಗೆ ತೊಂದರೆಗಳಿವೆ. ವಿದ್ಯುತ್ ಉತ್ಪಾದನೆಗೆ ಕಟ್ಟುವ ಅಣೆಕಟ್ಟಿನ ಹಿನ್ನೀರಿನಿಂದ ಕರ್ನಾಟಕ ಮತ್ತು ತಮಿಳುನಾಡಿನ ಅರಣ್ಯಪ್ರದೇಶ ಮತ್ತು ಆ ಭಾಗದ ಹಳ್ಳಿಗಳು ಮುಳುಗಡೆಯಾಗುತ್ತವೆ. ಅಲ್ಲಿನ ಜನರು ನಿರಾಶ್ರಿತರಾಗಬೇಕಾಗುತ್ತದೆ. ಜತೆಗೆ ವಿದ್ಯುತ್ ಹಂಚಿಕೆಯ ವಿವಾದಗಳೂ ಹುಟ್ಟಿಕೊಳ್ಳಬಹುದು. ಅಣೆಕಟ್ಟಿನಿಂದಾಗಿ, ನೀರು ಹರಿಯುವುದು ಕಡಿಮೆಯಾಗಿ ಹೊಗೇನಕಲ್ಲಿನ ಜಲಪಾತದ ಪ್ರವಾಸಿ ಆಕರ್ಷಣೆ ಕಡಿಮೆಯಾಗಬಹುದು.

ಆದರೆ, ಈಗ ಪರಿಸ್ಥಿತಿ ಹೇಗಿದೆಯೆಂದರೆ, ಹೊಗೇನಕಲ್ ಬಗ್ಗೆ ಏನೂ ತಿಳಿಯದವರೂ ಕೂಡ ಹೊಗೇನಕಲ್ ಕುರಿತು ಮಾತಾಡುತ್ತಾರೆ. ಹೊಗೆಯಾಡುತ್ತಿರುವ ವಿವಾದವನ್ನ ಬೆಂಕಿಯಾಗಿಸಲು ಯತ್ನಿಸುತ್ತಾರೆ. ಈ ವಿವಾದದ ಹೆಸರಲ್ಲಿ ತಮ್ಮ ಬೇಳೆ ಯಾರ್ಯಾರು ಬೇಯಿಸಿಕೊಳ್ಳುತ್ತಾರೋ ಗೊತ್ತಿಲ್ಲ, ಇದರಿಂದ ಯಾರಿಗೇನು ಲಾಭವೋ ಗೊತ್ತಿಲ್ಲ. ಆದರೆ, ಕರ್ನಾಟಕ ಸರಕಾರಕ್ಕೆ ಮಾತ್ರ ವಿವಾದದ ಬಗೆಗೆ ಸಂಪೂರ್ಣ ಮಾಹಿತಿಯಿದೆ. ತನ್ನ ಮಿತಿಗಳ ಬಗೆಗೆ ಅರಿವು ಕೂಡ ಇದೆ. ಇದಕ್ಕೆ ಜಲಸಂಪನ್ಮೂಲ ಇಲಾಖೆ ಸಿದ್ಧಪಡಿಸಿರುವ ಟಿಪ್ಪಣಿಯಲ್ಲಿರುವ ಮಾಹಿತಿಗಳೇ ಸಾಕ್ಷಿ. ಹಾಗಾಗಿ, ಕರುಣಾನಿಧಿಯವರ ಹೇಳಿಕೆಗಳಿಗೆ ಪ್ರತಿಯಾಗಿ ಉದ್ರಿಕ್ತ ಹೇಳಿಕೆಗಳನ್ನು ನೀಡುವುದು ಸೂಕ್ತವಲ್ಲ ಎಂಬುದು ಇಲ್ಲಿನ ಮಂತ್ರಿಗಳಿಗಂತೂ ಅರಿವಾದಂತಿದೆ.

ಕರ್ನಾಟಕದ ಹೋರಾಟಗಾರರಿರಲಿ, ರಾಜಕಾರಣಿಗಳಿರಲಿ, ಕೊನೆಗೆ ಮಾಧ್ಯಮಗಳೇ ಇರಲಿ - ಎಲ್ಲವನ್ನೂ ವೈಯಕ್ತಿಕ ಹಿತಾಸಕ್ತಿಯ ದೃಷ್ಟಿಯಿಂದ ನೋಡಿ ಲಾಭ ಪಡೆದುಕೊಳ್ಳಲೆತ್ನಿಸುವವರೇ ಇಲ್ಲಿ ಹೆಚ್ಚು. ಹಾಗಾಗಿ ಸತ್ಯಗಳು ಯಾರಿಗೂ ಬೇಕಿಲ್ಲ. ಇವರ ನಡುವೆ ಶ್ರೀಸಾಮಾನ್ಯನಿಗೆ ವಿಷಯಗಳು ಸರಿಯಾಗಿ ಅರ್ಥವಾಗದೆ ಕತ್ತಲಲ್ಲಿರುವಂತಾಗಿದೆ.

Friday, July 11, 2008

ಒಮ್ಮೆ ಯೋಚಿಸಿ ನೋಡಿ...!


ಈಗ ಕರ್ನಾಟಕದಲ್ಲಿ ನಡೀತಿರೋ ರಾಜಕೀಯ ಬೆಳವಣಿಗೆಗಳನ್ನ ಕಂಡರೆ ಒಂದು ರೀತಿಯ ಭಯ, ಆತಂಕ ಕಾಡ್ತದೆ. ದೇಶದ ಬಗ್ಗೆ ಭವಿಷ್ಯದ ಬಗ್ಗೆ ನಾವೆಷ್ಟೇ ನಿರ್ಲಿಪ್ತರಾಗಿದ್ದರೂ ಮನದ ಯಾವುದೋ ಮೂಲೆಯಲ್ಲಿ ಸಣ್ಣದೊಂದು ದೇಶದ ಬಗ್ಗೆ ಆಸಕ್ತಿ (ಹಂಬಲ) ಅನ್ನೋದು ಇರುತ್ತಲ್ವ. ಹಾಗಾಗಿ ನಮ್ಮ ರಾಜ್ಯದಲ್ಲಿ ನಡೀತಿರೋ ಪೊಲಿಟಿಕಲ್ ಡೆವಲಪ್ಮೆಂಟ್ಸ್ ಬಗ್ಗೆ ಯೋಚಿಸಿದಾಗ ಆತಂಕ ಕಾಡುತ್ತೆ.


ರಾಜಕೀಯ ಅಂದ್ರೇನೇ ರಾಡಿ ಅಂತ ಎಷ್ಟೇ ಸಮಾಧಾವ ಪಟ್ಕೊಂಡ್ರೂ ತೀರಾ ಇಷ್ಟು ಕೊಳೆತು ನಾರುವುದನ್ನ ಸಹಿಸೋದು ಅಂದ್ರೆ ಒಂಥರಾ ಕಸಿವಿಸಿ ಅಲ್ವಾ... ದೇವೇಗೌಡರು ಒಂಥರಾ ರಾಜಕೀಯಕ್ಕೆ ನಾಂದಿ ಹಾಡಿದರೆ ಈ ಬಿಜೆಪಿಯವರದು ಅವರನ್ನೂ ಮೀರಿದ ತಂತ್ರ ಅಂತ ಅನ್ಸುತ್ತೆ. ಪ್ರಜಾಪ್ರಭುತ್ವದ ರಕ್ಷಣೆಯ ಹೆಸರಿನಲ್ಲಿ ಏನೇನೆಲ್ಲಾ ಕಾನೂನು ಮಾಡಿದರೂ ಅದರ ಅಡಿಯಲ್ಲಿ ನುಸುಳುವ ಮಾರ್ಗವನ್ನು ರಾಜಕಾರಣಿಗಳು ಕಂಡುಕೊಳ್ಳುತ್ತಾರೆ ಎಂಬುದಕ್ಕೆ ನಮ್ಮ ರಾಜ್ಯದ ಬಿಜೆಪಿ ಮಾದರಿಯಾಗಿದೆ. ಪಕ್ಷಾಂತರಕ್ಕೆ ಹೊಚ್ಚ ಹೊಸತೊಂದು ಭಾಷ್ಯ ಬರೆದಿದೆ. ಇದರ ಪರಿಣಾಮ ಮುಂದಿನ ದಿನಗಳಲ್ಲಿ ಯಾವ ಯಾವ ಕುರೂಪ ಪಡೆದುಕೊಳ್ಳಬಹುದು... ಪ್ರಜಾಪ್ರಭುತ್ವದ ಮೂಲ ತಳಪಾಯಕ್ಕೇ ಸಿಡಿಮದ್ದಿಟ್ಟು ಉಡಾಯಿಸಬಹುದು ಎಂಬುದನ್ನ ನೆನೆಸಿಕೊಂಡರೆ ಹೃದಯ ಕಂಪಿಸುತ್ತದೆ ಅಲ್ವಾ..


ಇದುವರೆಗೆ ಚುನಾವಣೆ ಹಣದ ಬಲದಿಂದಲೇ ನಡೆಯುತ್ತಿದೆ ಎಂದು ಗೊತ್ತಿದ್ದರೂ... ಮತದಾರರನ್ನೂ ಸೇರಿಸಿ ಎಲ್ಲವನ್ನೂ ಹಣವೇ ನಿರ್ವಹಿಸುವ ಮಟ್ಟಕ್ಕೆ ಇಳಿದಿರಲಿಲ್ಲ. ಕಳೆದ ಕರ್ನಾಟಕದ ವಿಧಾನ ಸಭಾ ಚುನಾವಣೆ ಅದಕ್ಕೂ ಮುನ್ನುಡಿ ಬರೆಯಿತು. ದುಡ್ಡೊಂದನ್ನು ಹೊರತು ಪಡಿಸಿ ಎಲ್ಲವೂ ಸ್ತಬ್ಥಗೊಂಡಿತ್ತೇನೋ ಎಂಬಷ್ಟರ ಮಟ್ಟಿಗೆ ಹಣದ ಪೆಡಂಭೂತ ಕೇಕೆ ಹಾಕಿ ಕುಣಿದಾಡಿತ್ತು. ಗಣಿಯ ಹಣ ಪ್ರಜಾಪ್ರಭುತ್ವ ವ್ಯವಸ್ಥೆಯ ಬುನಾದಿ ಎನಿಸಿದ ಜನಾದೇಶದ ಮೂಲ ಅಸ್ತಿತ್ವವನ್ನೇ ಅಣಕಿಸುವಂತಿತ್ತು. ಮತ ಪಾವಿತ್ರ್ಯತೆಗೆ ಅಪಚಾರ ಎಸಗಿತ್ತು.
ಇನ್ನು ಮುಂದೆ ಅದರ ರೌದ್ರತೆ ಮತ್ತಷ್ಟು ಹೆಚ್ಚಾಗುವ ಎಲ್ಲ ಲಕ್ಷಣಗಳೂ ಈಗಲೇ ಗೋಚರಿಸುತ್ತಿವೆ. ಆಯ್ಕೆಗೊಂಡು ಒಂದೂವರೆ ತಿಂಗಳಲ್ಲೇ ಜನಾದೇಶವನ್ನು ಕಾಲ ಕಸಕ್ಕಿಂತಲೂ ಕೀಳಾಗಿಸಿ ಪುನಃ ಆಯ್ಕೆಗಾಗಿ ಮತ ಭಿಕ್ಷೆಗೆ ತೆರಳುತ್ತಾರೆ. ಆ ಸಂದರ್ಭದಲ್ಲಿ ಈ ವಿಶೇಷ ಪಕ್ಷಾಂತರಿಗಳಿಗೆ ಬೇಕಿರುವುದು ಪ್ರಜ್ಞಾವಂತರ ಮತಗಳಲ್ಲ. ಹಣಕ್ಕಾಗಿ ಮತ ಮಾರಿಕೊಳ್ಳುವವರ ದುರ್ಬಲ ಮತಗಳು. ಎಷ್ಟೇ ಜಾಗೃತಿ ಮೂಡಿಸುವ ಕಾರ್ಯವಾದರೂ ಮತ ಬಿಕರಿಗೇನೂ ನಮ್ಮಲ್ಲಿ ಕೊರತೆ ಇಲ್ಲವಲ್ಲ ಎಂಬುದೇ ಇವರ ಧೈರ್ಯ. ಹೇಗೂ ಕಳೆದ ಚುನಾವಣೆಯಲ್ಲಿ ಗಣಿ ಹಣ ಸುರಿದು ಮತಗಳನ್ನು ಬಾಚಿ ಗುಡ್ಡೆ ಹಾಕಿಕೊಂಡ ಅನುಭವವಿದೆಯಲ್ಲ!


ಇದು ಒಂದು ರೀತಿಯ ವಿಷ ವರ್ತುಲದಂತೆ ವಿಸ್ತಾರಗೊಳ್ಳುತ್ತ ಸಾಗುವ ಅಪಾಯದ ಎಲ್ಲ ಮುನ್ಸೂಚನೆಗಳೂ ಗೋಚರಿಸುತ್ತಿವೆ. ಇದಕ್ಕೆ ಪರಿಹಾರ ಅಷ್ಟು ಸುಲಭ ಅಲ್ಲ. ಅದಕ್ಕಾಗಿ ವಿಶೇಷ ಕಾನೂನನ್ನೇ ರೂಪಿಸುವ ಅನಿವಾರ್ಯತೆ ಇದೆ. ಅಥವಾ ಈಗಿರುವ ಪಕ್ಷಾಂತರ ನಿಷೇಧ ಕಾಯಿದೆಗೆ ತಿದ್ದುಪಡಿ ತಂದು ಮತ್ತಷ್ಟು ಬಲಪಡಿಸಬೇಕಿದೆ. ಈಗಿನಂತೆ ರಾಜಕೀಯಕ ಕಾರಣಗಳಿಗಾಗಿ ಅಭಿವೃದ್ಧಿಯ ಹೆಸರಿನಲ್ಲಿ ವಿನಾಕಾರಣ ತಮ್ಮ ಶಾಸಕತ್ವಕ್ಕೆ ರಾಜೀನಾಮೆ ನೀಡಿದವರಿಗೆ ಪುನಃ ಎರಡು ಟೆರ್ಮ್ ಗಳಿಗೆ ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ನಿರ್ಬಂಧ ಹೇರುವ ಕಾನೂನು ಜಾರಿಗೆ ತರುವ ಬಗ್ಗೆ ಚಿಂತನೆ ನಡೆಯಬೇಕಿದೆ. ಹೀಗಾದಲ್ಲಿ ಜನಾದೇಶಕ್ಕೆ ಹಾಗೂ ಪ್ರತಿ ಮತಕ್ಕೂ ಒಂದು ಮೌಲ್ಯ ತಂದು ಕೊಡುವುದು ಸಾಧ್ಯವೇನೋ..?


ಒಟ್ಟಿನಲ್ಲಿ ಪಕ್ಷಾಂತರ ನಿಷೇಧ ಕಾಯಿದೆಯನ್ನು ಬಿಗಿಗೊಳಿಸಿ ಜಾರಿಗೆ ತಂದ ಬಿಜೆಪಿ ಪಕ್ಷದಿಂದಲೇ ಅದರ ಅಣಕ ನಡೆದಿರುವುದು ವಿಪರ್ಯಾಸ!


- ಕರಣಂ ರಮೇಶ್
krnmsrk@gmail.com

Thursday, July 10, 2008

ಅಧಿಕೃತ ದರೋಡೆ...

ವಿವಿಧ ಪ್ರಾಯೋಗಿಕ ಅಡ್ಡಿಗಳಿಂದಾಗಿ ಶಾಸಕರ ಮತ್ತು ವಿಧಾನಸಭೆ ಕ್ಷೇತ್ರಗಳ ವಿವರ ಇಲ್ಲಿ ಹಾಕುವುದು ತಡವಾಗುತ್ತಿದೆ. ಆದರೆ, ಯಾಕೋ ಈಗ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ, ಈ ರೀತಿಯ ಯೋಚನೆಗಳಿಗೆ ಅರ್ಥವೇ ಇಲ್ಲವೇನೋ ಅನಿಸುತ್ತಿದೆ. ಇರಲಿ, ಸದ್ಯಕ್ಕೆ ನನ್ನ ತಲೆಯಲ್ಲಿ ಹುಳವಾಗಿ ಕೊರೆಯುತ್ತಿರುವ ವಿಷಯದ ಬಗೆಗೊಂದಿಷ್ಟು ಬರೆಯುತ್ತೇನೆ, ನಿಮ್ಮೆಲ್ಲರ ಅನಿಸಿಕೆಯೇನೆಂದು ತಿಳಿಯುವ ಕುತೂಹಲ ಕೂಡ ನನಗಿದೆ...

++++++++++++++++++++++++++++++

ಗದಗದಲ್ಲಿ ಕಪ್ಪತಗುಡ್ಡವೆಂಬ ಗುಡ್ಡವಿದೆ. ಹೊಸಪೇಟೆಯಿಂದ ಕೊಪ್ಪಳ ಮಾರ್ಗವಾಗಿ ಕಾರವಾರಕ್ಕೆ ಹೋಗುವಾಗ ಈ ಗುಡ್ಡದ ಮೂಲಕವೇ ಹೋಗಬೇಕು. ಗಾಳಿವಿದ್ಯುತ್ ಯೋಜನೆಯೊಂದು ಈ ಗುಡ್ಡದಲ್ಲಿ ಕಾರ್ಯವೆಸಗುತ್ತಿದೆ. ಇದು ಅಮೂಲ್ಯ ಸಸ್ಯಸಂಪತ್ತನ್ನು ಕೂಡ ಹೊಂದಿದೆ. ಅಷ್ಟು ಮಾತ್ರವಲ್ಲ, ಪ್ರತಿ ಅಮಾವಾಸ್ಯೆಗೂ ಇಲ್ಲಿ ಕಾಡ್ಗಿಚ್ಚು ಹಬ್ಬುವುದು ಸಾಮಾನ್ಯವಾಗಿ, ಕೆಲಕಾಲ ಸುದ್ದಿ ಮಾಡಿತ್ತಂತೆ. ಹಿಂದೆ ಕೊಡರಕೊಂಕಿ ಅನ್ನುವ ಹಕ್ಕಿಗಳ ಸಾಮ್ರಾಜ್ಯವಾಗಿದ್ದ ಈ ಗುಡ್ಡದಲ್ಲಿ ಈಗ ಈ ಹಕ್ಕಿಗಳು ಬಹಳ ಕಡಿಮೆಯಾಗಿವೆಯಂತೆ.(ಈ ಹಕ್ಕಿಗಳು ಸುಗ್ಗಿಯ ಕಾಲದಲ್ಲಿ ಬೆಳೆಗಳಿಗೆ ದಾಳಿಯಿಟ್ಟು ಗುಡ್ಡದಲ್ಲಿ ಸಂಗ್ರಹ ಮಾಡುತ್ತಿದ್ದವಂತೆ, ಇವೆಲ್ಲ ನಾನು ಕೇಳಿತಿಳಿದಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಯಾರಲ್ಲಾದರೂ ಇದ್ದಲ್ಲಿ ತಿಳಿಯಲು ನಾನು ಕುತೂಹಲಿ)

ಈಗ ಈ ಗುಡ್ಡ ಮತ್ತೆ ಸುದ್ದಿ ಮಾಡಹೊರಟಿದೆ. ಬಲ್ಲ ಮೂಲಗಳ ಪ್ರಕಾರ ಕಪ್ಪತಗುಡ್ಡದಲ್ಲಿ ಗಣಿಗಾರಿಕೆ ಆರಂಭವಾಗುತ್ತಿದೆ. ಇನ್ನು ಮುಂದೆ ಇಲ್ಲಿ ಬುಲ್ ಡೋಜರ್-ಗಳದೇ ಕಾರುಬಾರಂತೆ. ಇನ್ನಷ್ಟು ತಿಳಿದವರು ಹೇಳುವ ಪ್ರಕಾರ ಈ ಗುಡ್ಡದಲ್ಲಿ ಮತ್ತು ಸುತ್ತಮುತ್ತ, ಹಲವು ಲೋಹಗಳ ನಿಕ್ಷೇಪವಿದೆ. ಎಲ್ಲಕ್ಕಿಂತ ಹೆಚ್ಚಾಗಿ ಚಿನ್ನದ ನಿಕ್ಷೇಪವಿದೆ. ಈ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ವರದಿಗಳಲ್ಲಿ ಪ್ರಸ್ತಾಪವೂ ಇದೆ.

ಅರಣ್ಯವಿರುವ ಪ್ರದೇಶದಲ್ಲಿ ಗಣಿಗಾರಿಕೆ, ಅರಣ್ಯ ಖಾತೆಯ ಸಹಯೋಗದಿಂದಲೇ ನಡೆಯಬೇಕು. ಖಾತೆ ಹಂಚಿಕೆ, ಜಿಲ್ಲಾ ಉಸ್ತುವಾರಿ ಇತ್ಯಾದಿಗಳಿಗೆ ಸಂಬಂಧಿಸಿದ ಎಲ್ಲಾ ರಾಜಕೀಯ ಲೆಕ್ಕಾಚಾರಗಳಲ್ಲೂ ವ್ಯವಸ್ಥಿತವಾಗಿ ಗಣಿದಣಿಗಳ ಹಿತಾಸಕ್ತಿ ಕಾಪಾಡಿಕೊಳ್ಳಲಾಗಿದೆ. ಗದಗ ಜಿಲ್ಲೆಯ ಉಸ್ತುವಾರಿ ಸಚಿವರು ಶ್ರೀರಾಮುಲು... ಖಾತೆ ಮರುಹಂಚಿಕೆಯ ನಂತರ ಅರಣ್ಯಖಾತೆ ಬರಲಿರುವುದು ಜನಾರ್ದನ ರೆಡ್ಡಿಗಂತೆ... ತಮ್ಮ ಕಾರ್ಯಕ್ಕೆ ಯಾರಿಂದಲೂ ತೊಂದರೆ ಬರದಂತೆ ನೋಡಿಕೊಳ್ಳಲು ಉಸ್ತುವಾರಿ ಸಚಿವರಿದ್ದರೆ, ವ್ಯವಸ್ಥಿತವಾಗಿ ಕಾರ್ಯ ಮುಗಿಸಲು ಅರಣ್ಯಖಾತೆಯ ಸಂಪೂರ್ಣ ಸಹಕಾರವಿರುತ್ತದೆ. ಹಾಗೆ, ಇಲ್ಲಿನ ಚಿನ್ನದ ಗಣಿಯ ರಾಷ್ಟ್ರೀಕರಣವಾಗದೆಯೇ, ಚಿನ್ನಕ್ಕಾಗಿ ನಡೆಯುತ್ತಿದೆಯೆಂದು ಅಧಿಕೃತವಾಗಿ ಯಾರಿಗೂ ಗೊತ್ತಾಗದೆಯೇ, ಚಿನ್ನದ ನಿಕ್ಷೇಪಗಳು ಮಾಯವಾಗಲಿವೆ. ಸದ್ಯಕ್ಕೆ ಇದನ್ನು ವಿರೋಧಿಸುವವರೂ ಯಾರೂ ಇಲ್ಲ.

ಗಣಿಗಾರಿಕೆಯೊಂದು ಆಕ್ಟೋಪಸ್ ಇದ್ದಹಾಗೆ... ಎಲ್ಲಾ ಗುಡ್ಡಗಳನ್ನು ಕಡಿದು ಸಸ್ಯಸಂಪತ್ತನ್ನು ನುಂಗಿಹಾಕಿ ಸುತ್ತಲ ಜನರ ಬದುಕನ್ನೇ ಕಿತ್ತುಕೊಂಡು ಮಳೆ-ಬೆಳೆಯಾಗದಂತೆ ಮಾಡಿದರೂ ಇದರ ಹಸಿವು ಇಂಗದು. ಗಣಿಗಾರಿಕೆಗೆ ಸಹ್ಯಾದ್ರಿ, ಪಶ್ಚಿಮ ಘಟ್ಟದ ಸೆರಗಿನಲ್ಲಿರುವ ಚೆನ್ನಗಿರಿ, ಕಲಘಟಗಿ ಹಾಗೂ ಇನ್ನು ಹಲವಾರು ಊರುಗಳು ಬಲಿಯಾಗಲಿವೆ. ಚಿನ್ನದ ನಿಕ್ಷೇಪವಿದೆಯೆಂದು ಕಂಡುಬಂದ ಧಾರವಾಡದ ಎತ್ತಿನಗುಡ್ಡದ ಮೇಲೂ ಗಣಿಲಾಬಿ ಕಣ್ಣು ಇಷ್ಟರಲ್ಲೇ ಬಿದ್ದಿರುತ್ತದೆ.

ಇದರಿಂದ ಆ ಊರುಗಳಿಗಂತೂ ಏನೇನೂ ಲಾಭವಿಲ್ಲ. ಪರಿಣಾಮ, ಬೆಲೆಬಾಳುವ ಅರಣ್ಯ ಸಂಪತ್ತಿನ ಮತ್ತು ಪ್ರಾಣಿಸಂಪತ್ತಿನ ನಾಶ. ಅದೂ ನಾಗರಿಕರು ಆರಿಸಿ ಕಳುಹಿಸಿದ ಪ್ರತಿನಿಧಿಗಳಿಂದ ತುಂಬಿದ ಸರಕಾರದಿಂದಲೇ. ವ್ಯವಸ್ಥಿತವಾಗಿ, ಮತ್ತು ಅಧಿಕೃತವಾಗಿ. ಏನಂತೀರಿ?

++++++++++++++++

(ಇದರಲ್ಲಿರುವ ಮಾಹಿತಿಗೆ ಪೂರಕವಾಗಿ ಇನ್ನೇನಾದರೂ ಇದ್ದಲ್ಲಿ, ಅಥವಾ ಬೇರೇನಾದರೂ ಮಾಹಿತಿಯಿದ್ದಲ್ಲಿ, ಅದನ್ನು ತಿಳಿಸಬಹುದು. ಬರಿಯ ಮಾಹಿತಿಗಳಿಂದ ಬೇರೇನೂ ಪ್ರಯೋಜನವಾಗದು ಅನ್ನುವುದು ಒಂದು ಮಟ್ಟಿಗೆ ನಿಜವಿರಬಹುದು, ಆದರೂ ಇರ್ಲಿ ಅಂತ ಈ ಬರಹ... ಏನಾದರೂ ಒಳ್ಳೆಯದಾದೀತೇನೋ ಅಂತ ಆಶೆ, ಅಷ್ಟೆ.)

Sunday, June 29, 2008

ಎಲ್ಲಿಂದ ಶುರು? ಹೇಳಿ...

ಬ್ಲಾಗಿನ ಮಟ್ಟದಲ್ಲಿ ಈ ಕೆಲಸ ಶುರುವೇನೋ ಆಗಿದೆ. ಈಗ ವಿಧಾನಸಭಾಕ್ಷೇತ್ರಗಳ ಮತ್ತು ಶಾಸಕರ ವಿವರದಿಂದ ಕೆಲಸ ಶುರು ಆಗಬೇಕು... ಇಲ್ಲಿ ಭಾಗವಹಿಸುತ್ತಿರುವವರ ಕ್ಷೇತ್ರಗಳಿಂದಲೇ ಆರಂಭಿಸುವ ಐಡಿಯಾ ನನ್ನದು... ಅದು ಸರಿ ಅನ್ಸಿದ್ರೆ ನಿಮ್ ನಿಮ್ಮ ಕ್ಷೇತ್ರಗಳ ಹೆಸರು ಕಮೆಂಟ್ ಆಗಿ ಪೋಸ್ಟ್ ಮಾಡಿ, ಅಲ್ಲಿಂದ್ಲೇ ಕೆಲ್ಸ ಶುರು ಮಾಡೋಣ.
ಮೊದಲಿಗೆ ನಾನು. ನಾನು ಕೇರಳದವಳು, ಹಾಗಾಗಿ ನನ್ನ ಮತದಾನದ ಹಕ್ಕು ಅಲ್ಲಿದೆ. ಆದ್ರೆ ಬೆಂಗಳೂರಿನಲ್ಲಿ ನಾನಿರುವ ಕ್ಷೇತ್ರ ಹೆಬ್ಬಾಳ. ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಇಲ್ಲಿಯ ಶಾಸಕರು. ಸಂಪುಟದಲ್ಲಿದ್ದು ಪ್ರಭಾವಿ ಖಾತೆಗಳನ್ನು ಹೊಂದಿದ್ದಾರೆ.

Wednesday, June 25, 2008

ಕರ್ನಾಟಕದಲ್ಲಿ ಮಾನವ ಅಭಿವೃದ್ಧಿ - ವರದಿ...

ಒಂದು ಪ್ರದೇಶದ ಅಭಿವೃದ್ಧಿಗೆ ಅಳತೆಗೋಲು ಮಾನವ ಅಭಿವೃದ್ಧಿ ಸೂಚ್ಯಂಕ ( human development index) ಹಲವು ವರ್ಷಗಳಿಗೊಮ್ಮೆ ಬಿಡುಗಡೆಯಾಗುವ ಇದು,ಆಡಳಿತಯಂತ್ರಕ್ಕೆ ಮುಂದಿನ ಯೋಜನೆಗಳನ್ನು ಸರಿಯಾಗಿ ಯೋಜಿಸಲು ಸಹಾಯವಾಗಲೆಂಬ ಉದ್ದೇಶದಿಂದ ಯೋಜನಾ ಆಯೋಗಗಳಿಂದ ಬಿಡುಗಡೆ ಮಾಡಲ್ಪಡುತ್ತದೆ.

ಒಂದು ಪ್ರದೇಶದ ಜನರ ಸರಾಸರಿ ಆಯುಷ್ಯ, ಶಿಶುಮರಣ ಪ್ರಮಾಣ, ವಿದ್ಯಾವಂತರ ಮತ್ತು ವಿದ್ಯಾಭ್ಯಾಸದ ಪ್ರಮಾಣ, ಜೀವನದ ಗುಣಮಟ್ಟ, ತಲಾ ಆದಾಯ ಇತ್ಯಾದಿಗಳನ್ನು ಸೇರಿಸಿಕೊಂಡು ಅಲ್ಲಿನ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಅಳೆಯಲಾಗುತ್ತದೆ.

ಕರ್ನಾಟಕದ ವಿವಿಧ ಜಿಲ್ಲೆಗಳ ಮಾನವ ಅಭಿವೃದ್ಧಿ ಹೇಗಿದೆ ಎಂದು ತೋರಿಸುವ ವರದಿ, ಕಳೆದ ಸಲ ಬಿಡುಗಡೆಯಾದದ್ದು 2005ರಲ್ಲಿ. ಈ ವರದಿ, ಯೋಜನಾ ಆಯೋಗದ ವೆಬ್-ಸೈಟ್-ನಲ್ಲಿ ಸಿಗುತ್ತದೆ. ಲಿಂಕ್ ಇಲ್ಲಿದೆ...

ಇದರಲ್ಲಿನ ಅನೇಕ ವಿಚಾರಗಳು ಎಲ್ಲರಿಗೂ ಗೊತ್ತಿರಲಿಕ್ಕಿಲ್ಲ. ನಮ್ಮ ನಮ್ಮ ಜಿಲ್ಲೆಗಳಿಗೆ ಸಂಬಂಧಿಸಿದ ವಿವಿಧ ಮಾಹಿತಿಯನ್ನು ಇಲ್ಲಿಂದ ಕಲೆಹಾಕಬಹುದು...

Saturday, June 21, 2008

ಆರಂಭಕ್ಕೆಮುನ್ನ...

ನಮ್ಮ ರಾಜ್ಯದ ಬಗ್ಗೆ ನಮಗೇನು ಗೊತ್ತು?
ಇಲ್ಲಿನ ಸಮಸ್ಯೆಗಳ ಬಗ್ಗೆ ಏನು ಗೊತ್ತು?
ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ರಾಜ್ಯ ವಿವಿಧ ಇಲಾಖೆಗಳ ಮೂಲಕ ಎಷ್ಟು ಖರ್ಚು ಮಾಡುತ್ತಿದೆ, ಮತ್ತು ಅದರ ಪ್ರತಿಫಲ ಏನಾಗಿದೆ ಅನ್ನುವುದರ ಬಗ್ಗೆ ಏನು ಗೊತ್ತು?

ತಿಳಿದುಕೊಳ್ಳಬೇಕೆಂಬ ಕುತೂಹಲವಿರುವವರಿಗಾಗಿ ಈ ಜಾಲತಾಣ.

ತಮಗೆ ಗೊತ್ತಿರುವ ವಿಚಾರಗಳನ್ನು ಇಲ್ಲಿ ಹಂಚಿಕೊಳ್ಳುವ ಮತ್ತು ಇದರಲ್ಲಿ ಭಾಗವಹಿಸುವ ಆಸಕ್ತಿಯಿರುವವರಿಗೂ ಇಲ್ಲಿ ಸುಸ್ವಾಗತ.

1) ರಾಜ್ಯದ ಎಲ್ಲಾ ಮಂತ್ರಿಗಳ ಮತ್ತು ಖಾತೆಗಳ ಕುರಿತ ವಿವರ - ವಿವಿಧ ಬೆಳವಣಿಗೆಗಳ ಕುರಿತ ಚರ್ಚೆಗಳು
2) ಪ್ರತಿಯೊಬ್ಬ ಶಾಸಕರ ಕುರಿತ ಮತ್ತು ಅವರ ಕ್ಷೇತ್ರಗಳ ಕುರಿತ ಮಾಹಿತಿ - ಅಲ್ಲಿನ ಸಮಸ್ಯೆಗಳ ಕುರಿತ ಚರ್ಚೆಗಳು

ಇಲ್ಲಿ ನಿಮಗೆ ಮುಖ್ಯವಾಗಿ ಸಿಗಲಿವೆ.

ಬನ್ನಿ, ಭಾಗವಹಿಸಿ.