Friday, July 11, 2008

ಒಮ್ಮೆ ಯೋಚಿಸಿ ನೋಡಿ...!


ಈಗ ಕರ್ನಾಟಕದಲ್ಲಿ ನಡೀತಿರೋ ರಾಜಕೀಯ ಬೆಳವಣಿಗೆಗಳನ್ನ ಕಂಡರೆ ಒಂದು ರೀತಿಯ ಭಯ, ಆತಂಕ ಕಾಡ್ತದೆ. ದೇಶದ ಬಗ್ಗೆ ಭವಿಷ್ಯದ ಬಗ್ಗೆ ನಾವೆಷ್ಟೇ ನಿರ್ಲಿಪ್ತರಾಗಿದ್ದರೂ ಮನದ ಯಾವುದೋ ಮೂಲೆಯಲ್ಲಿ ಸಣ್ಣದೊಂದು ದೇಶದ ಬಗ್ಗೆ ಆಸಕ್ತಿ (ಹಂಬಲ) ಅನ್ನೋದು ಇರುತ್ತಲ್ವ. ಹಾಗಾಗಿ ನಮ್ಮ ರಾಜ್ಯದಲ್ಲಿ ನಡೀತಿರೋ ಪೊಲಿಟಿಕಲ್ ಡೆವಲಪ್ಮೆಂಟ್ಸ್ ಬಗ್ಗೆ ಯೋಚಿಸಿದಾಗ ಆತಂಕ ಕಾಡುತ್ತೆ.


ರಾಜಕೀಯ ಅಂದ್ರೇನೇ ರಾಡಿ ಅಂತ ಎಷ್ಟೇ ಸಮಾಧಾವ ಪಟ್ಕೊಂಡ್ರೂ ತೀರಾ ಇಷ್ಟು ಕೊಳೆತು ನಾರುವುದನ್ನ ಸಹಿಸೋದು ಅಂದ್ರೆ ಒಂಥರಾ ಕಸಿವಿಸಿ ಅಲ್ವಾ... ದೇವೇಗೌಡರು ಒಂಥರಾ ರಾಜಕೀಯಕ್ಕೆ ನಾಂದಿ ಹಾಡಿದರೆ ಈ ಬಿಜೆಪಿಯವರದು ಅವರನ್ನೂ ಮೀರಿದ ತಂತ್ರ ಅಂತ ಅನ್ಸುತ್ತೆ. ಪ್ರಜಾಪ್ರಭುತ್ವದ ರಕ್ಷಣೆಯ ಹೆಸರಿನಲ್ಲಿ ಏನೇನೆಲ್ಲಾ ಕಾನೂನು ಮಾಡಿದರೂ ಅದರ ಅಡಿಯಲ್ಲಿ ನುಸುಳುವ ಮಾರ್ಗವನ್ನು ರಾಜಕಾರಣಿಗಳು ಕಂಡುಕೊಳ್ಳುತ್ತಾರೆ ಎಂಬುದಕ್ಕೆ ನಮ್ಮ ರಾಜ್ಯದ ಬಿಜೆಪಿ ಮಾದರಿಯಾಗಿದೆ. ಪಕ್ಷಾಂತರಕ್ಕೆ ಹೊಚ್ಚ ಹೊಸತೊಂದು ಭಾಷ್ಯ ಬರೆದಿದೆ. ಇದರ ಪರಿಣಾಮ ಮುಂದಿನ ದಿನಗಳಲ್ಲಿ ಯಾವ ಯಾವ ಕುರೂಪ ಪಡೆದುಕೊಳ್ಳಬಹುದು... ಪ್ರಜಾಪ್ರಭುತ್ವದ ಮೂಲ ತಳಪಾಯಕ್ಕೇ ಸಿಡಿಮದ್ದಿಟ್ಟು ಉಡಾಯಿಸಬಹುದು ಎಂಬುದನ್ನ ನೆನೆಸಿಕೊಂಡರೆ ಹೃದಯ ಕಂಪಿಸುತ್ತದೆ ಅಲ್ವಾ..


ಇದುವರೆಗೆ ಚುನಾವಣೆ ಹಣದ ಬಲದಿಂದಲೇ ನಡೆಯುತ್ತಿದೆ ಎಂದು ಗೊತ್ತಿದ್ದರೂ... ಮತದಾರರನ್ನೂ ಸೇರಿಸಿ ಎಲ್ಲವನ್ನೂ ಹಣವೇ ನಿರ್ವಹಿಸುವ ಮಟ್ಟಕ್ಕೆ ಇಳಿದಿರಲಿಲ್ಲ. ಕಳೆದ ಕರ್ನಾಟಕದ ವಿಧಾನ ಸಭಾ ಚುನಾವಣೆ ಅದಕ್ಕೂ ಮುನ್ನುಡಿ ಬರೆಯಿತು. ದುಡ್ಡೊಂದನ್ನು ಹೊರತು ಪಡಿಸಿ ಎಲ್ಲವೂ ಸ್ತಬ್ಥಗೊಂಡಿತ್ತೇನೋ ಎಂಬಷ್ಟರ ಮಟ್ಟಿಗೆ ಹಣದ ಪೆಡಂಭೂತ ಕೇಕೆ ಹಾಕಿ ಕುಣಿದಾಡಿತ್ತು. ಗಣಿಯ ಹಣ ಪ್ರಜಾಪ್ರಭುತ್ವ ವ್ಯವಸ್ಥೆಯ ಬುನಾದಿ ಎನಿಸಿದ ಜನಾದೇಶದ ಮೂಲ ಅಸ್ತಿತ್ವವನ್ನೇ ಅಣಕಿಸುವಂತಿತ್ತು. ಮತ ಪಾವಿತ್ರ್ಯತೆಗೆ ಅಪಚಾರ ಎಸಗಿತ್ತು.
ಇನ್ನು ಮುಂದೆ ಅದರ ರೌದ್ರತೆ ಮತ್ತಷ್ಟು ಹೆಚ್ಚಾಗುವ ಎಲ್ಲ ಲಕ್ಷಣಗಳೂ ಈಗಲೇ ಗೋಚರಿಸುತ್ತಿವೆ. ಆಯ್ಕೆಗೊಂಡು ಒಂದೂವರೆ ತಿಂಗಳಲ್ಲೇ ಜನಾದೇಶವನ್ನು ಕಾಲ ಕಸಕ್ಕಿಂತಲೂ ಕೀಳಾಗಿಸಿ ಪುನಃ ಆಯ್ಕೆಗಾಗಿ ಮತ ಭಿಕ್ಷೆಗೆ ತೆರಳುತ್ತಾರೆ. ಆ ಸಂದರ್ಭದಲ್ಲಿ ಈ ವಿಶೇಷ ಪಕ್ಷಾಂತರಿಗಳಿಗೆ ಬೇಕಿರುವುದು ಪ್ರಜ್ಞಾವಂತರ ಮತಗಳಲ್ಲ. ಹಣಕ್ಕಾಗಿ ಮತ ಮಾರಿಕೊಳ್ಳುವವರ ದುರ್ಬಲ ಮತಗಳು. ಎಷ್ಟೇ ಜಾಗೃತಿ ಮೂಡಿಸುವ ಕಾರ್ಯವಾದರೂ ಮತ ಬಿಕರಿಗೇನೂ ನಮ್ಮಲ್ಲಿ ಕೊರತೆ ಇಲ್ಲವಲ್ಲ ಎಂಬುದೇ ಇವರ ಧೈರ್ಯ. ಹೇಗೂ ಕಳೆದ ಚುನಾವಣೆಯಲ್ಲಿ ಗಣಿ ಹಣ ಸುರಿದು ಮತಗಳನ್ನು ಬಾಚಿ ಗುಡ್ಡೆ ಹಾಕಿಕೊಂಡ ಅನುಭವವಿದೆಯಲ್ಲ!


ಇದು ಒಂದು ರೀತಿಯ ವಿಷ ವರ್ತುಲದಂತೆ ವಿಸ್ತಾರಗೊಳ್ಳುತ್ತ ಸಾಗುವ ಅಪಾಯದ ಎಲ್ಲ ಮುನ್ಸೂಚನೆಗಳೂ ಗೋಚರಿಸುತ್ತಿವೆ. ಇದಕ್ಕೆ ಪರಿಹಾರ ಅಷ್ಟು ಸುಲಭ ಅಲ್ಲ. ಅದಕ್ಕಾಗಿ ವಿಶೇಷ ಕಾನೂನನ್ನೇ ರೂಪಿಸುವ ಅನಿವಾರ್ಯತೆ ಇದೆ. ಅಥವಾ ಈಗಿರುವ ಪಕ್ಷಾಂತರ ನಿಷೇಧ ಕಾಯಿದೆಗೆ ತಿದ್ದುಪಡಿ ತಂದು ಮತ್ತಷ್ಟು ಬಲಪಡಿಸಬೇಕಿದೆ. ಈಗಿನಂತೆ ರಾಜಕೀಯಕ ಕಾರಣಗಳಿಗಾಗಿ ಅಭಿವೃದ್ಧಿಯ ಹೆಸರಿನಲ್ಲಿ ವಿನಾಕಾರಣ ತಮ್ಮ ಶಾಸಕತ್ವಕ್ಕೆ ರಾಜೀನಾಮೆ ನೀಡಿದವರಿಗೆ ಪುನಃ ಎರಡು ಟೆರ್ಮ್ ಗಳಿಗೆ ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ನಿರ್ಬಂಧ ಹೇರುವ ಕಾನೂನು ಜಾರಿಗೆ ತರುವ ಬಗ್ಗೆ ಚಿಂತನೆ ನಡೆಯಬೇಕಿದೆ. ಹೀಗಾದಲ್ಲಿ ಜನಾದೇಶಕ್ಕೆ ಹಾಗೂ ಪ್ರತಿ ಮತಕ್ಕೂ ಒಂದು ಮೌಲ್ಯ ತಂದು ಕೊಡುವುದು ಸಾಧ್ಯವೇನೋ..?


ಒಟ್ಟಿನಲ್ಲಿ ಪಕ್ಷಾಂತರ ನಿಷೇಧ ಕಾಯಿದೆಯನ್ನು ಬಿಗಿಗೊಳಿಸಿ ಜಾರಿಗೆ ತಂದ ಬಿಜೆಪಿ ಪಕ್ಷದಿಂದಲೇ ಅದರ ಅಣಕ ನಡೆದಿರುವುದು ವಿಪರ್ಯಾಸ!


- ಕರಣಂ ರಮೇಶ್
krnmsrk@gmail.com

2 comments:

shankar said...

ನಿಮ್ಮ ಯೋಚನೆಯಂತೆ ನಮ್ಮದೂ ಚಿಂತನೆ ನಡೆದಿದೆ. ಎಲ್ಲಿಯವರೆಗೆ ಅವಕಾಶವಾದಿ ರಾಜಕಾರಣಿಗಳು ಇರುತ್ತಾರೋ ಅವರ ಕೈಗೊಂಬೆಯಾಗಿ ವರ್ತಿಸುವ ಮಾದ್ಯಮಗಳಿರುತ್ತವೋ ಅಲ್ಲಿಯವರೆಗೂ, ಪಕ್ಷಾಂತರ, ಅಧಿಕಾರ ದಾಹ ಮಾಮೂಲು. ಕೆಲವೊಬ್ಬರು ಬಹಿರಂಗವಾಗಿಯೇ ಅಧಿಕಾರಕ್ಕಾಗಿ ಪಕ್ಷಾಂತರ ಆಗಲಿ ಅಥವಾ ವಾಮ ಮಾರ್ಗ ಅನುಸರಿಸಿದರೆ ಇನ್ನು ಕೆಲವರು ಗುಪ್ತವಾಗಿದ್ದುಕೊಂಡೆ ಇವರ ದಾರಿ ತುಳಿದಿರುತ್ತಾರೆ. ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಪಕ್ಷಾಂತರ, ಅಧಿಕಾರ ದಾಹ, ಕುದುರೆ ವ್ಯಾಪಾರ ಅನಿವಾರ್ಯ. ಇವುಗಳನ್ನು ಪಾಲಿಸದಿದ್ದವನೇ ರಾಜಕಾರಣಿ ಅನಿಸಿಕೊಳ್ಳಲು ಅಯೋಗ್ಯ ಎನ್ನುವ ಪರಿಸ್ಛಿತಿ ಬಂದಿದೆ. ಮಾಧ್ಯಮಗಳು ಈ ಬಗ್ಗೆ ಎಷ್ಟೆ ಟೀಕೆ ಟಿಪ್ಪಣಿ ಮಾಡಿದರೂ ನಾಯಿ ಬಾಲ ಡೊಂಕೇ ಎನ್ನುವಂತಾಗಿದೆ. ವೆಬ್ ಸೈಟ್ ಮೂಲಕ, ಬ್ಲಾಗ್ ಮೂಲ, ಸಂಫ ಸಂಸ್ಧೆ ಕಟ್ಟುವ ಮೂಲಕ ಈ ವ್ಯವಸ್ಥೆಯ ವಿರುದ್ಧ ಹೋರಾಡುತ್ತೇನೆನ್ನುವುದು ಮೂರ್ಖತನದ ಪರಮಾವಧಿ ಎನಿಸಿದರೂ, ಎಲ್ಲೋ ಒಂದು ಮೂಲೆಯಲ್ಲಿ ರಾಮನ ಸೇತುವೆಗೆ ನಮ್ಮದೂ ಒಂದು ಕಲ್ಲು ಇಟ್ಟೆವಲ್ಲ ಎನ್ನುವ ಅಳಿಲು ಪ್ರಯತ್ನ ಎಂದುಕೊಳ್ಳದೇ ವಿಧಿಯಿಲ್ಲ. ಕೇವಲ ಲೇಖಣಿಯಿಂದ ಆಗುವ ಕೆಲಸ ಇದಾಗಿ ಉಳಿದಿಲ್ಲ, ಈ ಪ್ರಯತ್ನಕ್ಕೆ ಅನ್ಯ ಮಾರ್ಗಗಳನ್ನೂ ಹುಡುಕುವುದು ಒಳಿತೆನಿಸುತ್ತದೆ.

ಶಂಕರ್

ಉಷಾ... said...

Rajakaranigala bagge nadediruva chintane sariyagide...

Avara bele beyisikondu mahadi kattuva.. maneyavarannella rajakaranakke ilisuva bjp hagu devegowdara ketta rajakeeya besaravagide...

matadara madida votege bele illa... namma mane hattirave chunavane time'lli henda seeregalannu hanchuvudannu nodiddene.. duddu tegedukondaddarinda avarige mata kodabekemba avara yochaneyannu keli moorkhatanavo athva mugdhateyo anta gottaglilla... nantara ella gottiddu maduva moorkhatana ennuva nirdharakke bandiddene... edurisalu maneyavaru bidta illa anno bejaride.. parihara yaradaru soochisidare jarige taruva manassu ide.... :(